UDUPI : ಪತಿ ಸಾವು ; ಮನೆಯವರಿಂದ ಪತ್ನಿ, ಮಗು ತಿರಸ್ಕಾರ
Friday, August 26, 2022
ಪತಿ ಮೃತಪಟ್ಟ ಬಳಿಕ ಆತನ ಪತ್ನಿ ಹಾಗೂ ಮಗುವನ್ನು ಕರೆದುಕೊಂಡು ಹೋಗಬೇಕಾದ ಮನೆಯವರು ಆಕೆಯನ್ನು ತಿರಸ್ಕರಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿಯಲ್ಲಿ ಹಲವಾರು ವರ್ಷಗಳಿಂದ ಮೆಕ್ಯಾನಿಕ್ ಆಗಿ ಜೀವನ ನಿರ್ವಹಿಸುತ್ತಿದ್ದ ಬಾದಾಮಿ ಮೂಲದ ಅಯ್ಯಪ್ಪ (28) ಹೃದಯಾಘಾತದಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮನೆಯವರಿಗೆ ತಿಳಿಸಿದಾಗ, ಮೃತದೇಹ ಸ್ವೀಕರಿಸಲು ಒಪ್ಪಿದ್ದಾರೆ.
ಆದ್ರೆ ಅಯ್ಯಪ್ಪನ ಬಾಣಂತಿ ಪತ್ನಿ ಹಾಗೂ ೨೦ ದಿನಗಳ ಮಗುವನ್ನು ಕರೆದುಕೊಂಡು ಹೋಗಲು ನಿರಾಕರಿಸಿದ್ದಾರೆ. ಅಯ್ಯಪ್ಪ ಎರಡು ವರ್ಷಗಳ ಹಿಂದೆ ಗಂಗಾವತಿಯ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಮದುವೆಗೆ ಎರಡೂ ಕಡೆಯಿಂದಲೂ ತೀವ್ರ ವಿರೋಧವಿತ್ತು. ಹೀಗಾಗಿ ಯುವತಿಯನ್ನು ಕರೆದುಕೊಂಡು ಹೋಗಲು ನಿರಾಕರಿಸಿದ್ದಾರೆ. ಘಟನೆಯ ಮಾಹಿತಿ ಪಡೆದ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ, ಸ್ಥಳಕ್ಕೆ ಧಾವಿಸಿ ಮೃತನ ಪತ್ನಿ ಹಾಗೂ ಆಕೆಯ 20 ದಿನಗಳ ಮಗುವನ್ನು ಉಡುಪಿಯ ಸಖಿ ಸೆಂಟರ್‌ಗೆ ದಾಖಲಿಸಿ ಮಾನವೀಯ ನೆರವು ನೀಡಿದ್ದಾರೆ.