UDUPI ; ಅನುಮಾನಾಸ್ಪದ ರೀತಿಯಾಗಿ, ತಿರುಗಾಡುತ್ತಿದ್ದ ಮೂವರು ಖದೀಮರ ಬಂಧನ
Sunday, August 7, 2022
ಆಟೋದಲ್ಲಿ ಅನುಮಾನಾಸ್ಪದ ರೀತಿಯಾಗಿ, ತಿರುಗಾಡುತ್ತಿದ್ದ ಮೂವರನ್ನು ಉಡುಪಿಯ ಪಡುಬಿದ್ರಿಯಲ್ಲಿ ಪೊಲೀಸರು
ಬಂಧಿಸಿದ್ದಾರೆ. ಮಂಗಳೂರಿನ ಬಜಪೆ ಮೂಲದ ಮಹಮ್ಮದ್ ಆರೀಫ್ ಅಲಿಯಾಸ್ ಮುನ್ನ (37), ಮಹಮ್ಮದ್ ಮುನೀರ್ (24) ಮತ್ತು ಅಕ್ಬರ್ (36) ಪೊಲೀಸರ ಬಂಧಿತರು.
ಬಂಧಿತರ ತೀವ್ರ ವಿಚಾರಣೆ ನಡೆಸಿದ ಪೊಲೀಸರ ತಂಡ, ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ಎರಡೂವರೆ ಪವನ್ ತೂಕದ ಚಿನ್ನದ ಸರ, 1 ಮೊಬೈಲ್, 61 ಸಾವಿರ ರೂ. ನಗದು, 3 ದ್ವಿಚಕ್ರ ವಾಹನ ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾ ಬೈಕ್ ಸಹಿತ ವಿವಿಧ ಸೊತ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಬಂಧಿತರ ಪೈಕಿ ಮಹಮ್ಮದ್ ಆರೀಫ್ ಅಲಿಯಾಸ್ ಮುನ್ನ ಮತ್ತು ಮಹಮ್ಮದ್ ಮುನೀರ್ ಸಹೋದರರಾಗಿದ್ದು, ಅಕ್ಬರ್ ಸಹೋದರರ ಪರಿಚಿತ ಮತ್ತು ಸಂಬಂಧಿ. ಮೊದಲ ಆರೋಪಿಯ ವಿರುದ್ಧ ಬ್ರಹ್ಮಾವರ, ಮೂಲ್ಕಿ, ಬಜಪೆ, ಮಂಗಳೂರು ಗ್ರಾಮಾಂತರ ಮತ್ತು ಹಾಸನ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 18 ಪ್ರಕರಣಗಳು ದಾಖಲಾಗಿವೆ. ಎರಡನೇ ಆರೋಪಿ ಮಹಮ್ಮದ್ ಮುನೀರ್ ವಿರುದ್ಧ ಬ್ರಹ್ಮಾವರ ಮತ್ತು ಹಾಸನ ಸಿಟಿ ಪೊಲೀಸ್ ಠಾಣೆಯಲ್ಲಿ 8 ಪ್ರಕರಣಗಳು ದಾಖಲಾಗಿದ್ದು, ಮತ್ತೋರ್ವ ಆರೋಪಿ ಅಕ್ಬರ್ ನ ವಿರುದ್ಧ 2 ಪ್ರಕರಣಗಳು ದಾಖಲಾಗಿವೆ.