
UDUPI : ಪ್ರಚೋದನಕಾರಿ ಪೋಸ್ಟ್ ಹಾಕಿದ್ರೆ ಹುಷಾರ್ : ಉಡುಪಿ ಎಸ್ಪಿ ಖಡಕ್ ಎಚ್ಚರಿಕೆ
Friday, August 5, 2022
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಮಂದಿ ಪ್ರಚೋದನಕಾರಿ ಪೋಸ್ಟ್ ಹಾಕುತ್ತಿರುವ ಕುರಿತು ಉಡುಪಿ ಜಿಲ್ಲಾ ಪೊಲೀಸ್ ಗಂಭೀರವಾಗಿ ಪರಿಗಣಿಸಿದ್ದು, ಪ್ರಚೋದನಾಕಾರಿ ಸಂದೇಶ ಅಥವಾ ಹೇಳಿಕೆಗಳನ್ನು ಹಾಕಿದಲ್ಲಿ ಅಂತವರ ವಿರುದ್ದ ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತೆ ಅಂತ ಉಡುಪಿ ಎಸ್ಪಿ ವಿಷ್ಣುವರ್ಧನ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅವರು, ಫೇಸ್ ಬುಕ್, ವಾಟ್ಸಾಪ್, ಟ್ವಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಕಾನೂನು ಸುವ್ಯವಸ್ಥೆ, ಶಾಂತಿ ಸುವ್ಯವಸ್ಥೆಗೆ, ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಹಾಗೂ ಪರಸ್ಪರ ಗುಂಪಿನ ನಡುವೆ ದ್ವೇಷ ಭಾವನೆ ಬರುವಂತಹ ಪ್ರಚೋದನಕಾರಿ ಹೇಳಿಕೆ (ಪೋಸ್ಟ್) ಗಳನ್ನು ಹಾಕುವವರ/ಫಾರ್ವರ್ಡ್ ಮಾಡುವವರ ವಿರುದ್ದವೂ ಕಾನೂನು ರೀತಿಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ವಾಟ್ಸಪ್, ಗ್ರೂಪ್ ಅಡ್ಮಿನ್ ಗಳು ಬಳಕೆದಾರರು ಹಾಗೂ ಸಂದೇಶಗಳನ್ನು ಫಾರ್ವರ್ಡ್ ಮಾಡುವವರು ಸೂಕ್ತ ಎಚ್ಚರಿಕೆಯನ್ನು ವಹಿಸುವುದು ಹಾಗೂ ವಾಟ್ಸಾಪ್ ಗ್ರೂಪ್ ಅಡ್ಮಿನ್ ಗಳು ತಮ್ಮ ಗುಂಪಿನ ಸದಸ್ಯರಿಗೆ ಸೂಕ್ತ ತಿಳುವಳಿಕೆ ನೀಡಬೇಕು. ಸಂಘಟನೆ, ವ್ಯಕ್ತಿಗಳು ಸೇರಿದಂತೆ ಸಾಮಾಜಿಕ ಜಾಲ ತಾಣದಲ್ಲಿ ಸಕ್ರಿಯವಾಗಿರುವ ನಾನಾ ವ್ಯಕ್ತಿಗಳು, ಗುಂಪುಗಳ ಮೇಲೆ ಕಠಿಣ ನಿಗಾ ಇರಿಸಲಾಗಿದೆ. ಆನ್ಲೈನ್ ಮಾಧ್ಯಮ, ವೆಬ್ ಪೇಜ್, ಮುದ್ರಣ ಮಾಧ್ಯಮ ಮೇಲೂ ನಿಗಾ ವಹಿಸಲಾಗಿದೆ ಅಂತ ಹೇಳಿದ್ದಾರೆ.
ಇಂತಹ ಪೋಸ್ಟ್ಗಳನ್ನು ಲೈಕ್, ಶೇರ್, ಫಾರ್ವಡ್ ಹಾಗೂ ಆಕ್ಷೇಪಾರ್ಹವಾಗಿ ಕಮೆಂಟ್ ಮಾಡುವವರ ವಿರುದ್ಧವೂ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಯಾರೇ ಆದರೂ ವಿವಾದಾತ್ಮಕ ಪೋಸ್ಟರ್, ಪ್ರಚೋಧನಾಕಾರಿ ಹೇಳಿಕೆ, ಗುಂಪುಗಾರಿಕೆ, ಗಲಾಟೆ ಮಾಡಿ ಸಮಾಜದ ಶಾಂತಿ, ನೆಮ್ಮದಿಗೆ ಭಂಗ ತರುವುದು ಕಂಡು ಬಂದಲ್ಲಿ ಸಂಬಂಧಪಟ್ಟ ಪೋಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.