-->

ಹರ್ ಘರ್ ತಿರಂಗಾ: ಸರಕಾರದ ನಿರ್ದೇಶನಗಳನ್ನು ಪಾಲಿಸಲು ಇದನ್ನು ಒಮ್ಮೆ ಓದಿ

ಹರ್ ಘರ್ ತಿರಂಗಾ: ಸರಕಾರದ ನಿರ್ದೇಶನಗಳನ್ನು ಪಾಲಿಸಲು ಇದನ್ನು ಒಮ್ಮೆ ಓದಿ


ಮಂಗಳೂರು:- ಅಸಂಖ್ಯಾತ ಹೋರಾಟ, ತ್ಯಾಗ, ಬಲಿದಾನಗಳ ಕಾರಣದಿಂದ ದಾಸ್ಯದ ಸಂಕೋಲೆಯಿಂದ ಬಿಡುಗಡೆಯಾದ ಭಾರತಾಂಬೆಗೆ ಪ್ರಾಪ್ತಿಯಾದ ಸ್ವಾತಂತ್ರ್ಯಕ್ಕೆ ಅಮೃತ ಮಹೋತ್ಸವದ ಸಂಭ್ರಮ. ಈ ಹಿನ್ನಲೆಯಲ್ಲಿ ದೇಶಾದ್ಯಂತ ಭಾರತ ಸ್ವಾತಂತ್ರ್ಯದ 75ನೇ ಸಂಭ್ರಮವನ್ನು ವೈವಿಧ್ಯಮಯವಾಗಿ ಆಚರಿಸುವ ಸಲುವಾಗಿ ಕೇಂದ್ರ ಸರ್ಕಾರ "ಹರ್ ಘರ್ ತಿರಂಗಾ” ಎಂಬ ಘೋಷ್ಯವಾಕ್ಯದೊಂದಿಗೆ ಇದೇ ಆಗಸ್ಟ್ 13 ರಿಂದ 15ರ ವರೆಗೆ ದೇಶದ ಪ್ರತೀ ಮನೆಯಲ್ಲೂ ರಾಷ್ಟ್ರ ಧ್ವಜವನ್ನು ಹಾರಿಸಿ ದೇಶ ಭಕ್ತಿ ಬಿಂಬಿಸುವ ಮೂಲಕ ರಾಷ್ಟ್ರ ಪ್ರೇಮವನ್ನು ಅಭಿವ್ಯಕ್ತಗೊಳಿಸುವಂತೆ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಅಭಿಯಾನದಲ್ಲಿ ಸರ್ಕಾರಿ ಕಟ್ಟಡಗಳ ಹಾಗೂ ಸಾರ್ವಜನಿಕರ ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸುವಂತೆ ಕೋರಲಾಗಿದೆ. 

ನಿರ್ದೇಶನ ಇಂತಿದೆ

ಜಿಲ್ಲೆಯ ಎಲ್ಲಾ ಸರ್ಕಾರಿ ಕಟ್ಟಡಗಳು, ಶಾಲೆ, ಕಾಲೇಜು ಹಾಗೂ ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯತ್ ಕಟ್ಟಡಗಳಲ್ಲಿ ರಾಷ್ಟ್ರೀಯ ಧ್ವಜದ ತ್ರಿವರ್ಣ ಧ್ವಜವನ್ನು ಹಗಲಿನಲ್ಲಿ ಮಾತ್ರ ಹಾರಿಸಲು ಅನುಮತಿಸಲಾಗಿದೆ. ಆ.13ರಿಂದ 15ರವರೆಗೆ ಪ್ರತಿದಿನ ಸೂರ್ಯೋದಯದ ನಂತರ ಬೆಳಿಗ್ಗೆ 8 ಗಂಟೆಯೊಳಗೆ ಧ್ವಜಾರೋಹಣ ಮಾಡುವುದು, ಹಾಗೆಯೇ ಸೂರ್ಯಾಸ್ತದ ವೇಳೆಗೆ ಇಳಿಸಬೇಕು. 

ಧ್ವಜ ಸಂಹಿತೆಯ ಯಾವುದೇ ಉಲ್ಲಂಘನೆಯಾಗದಂತೆ ಮತ್ತು ರಾಷ್ಟ್ರಧ್ವಜಕ್ಕೆ ಯಾವುದೇ ಅಗೌರವ ಉಂಟಾಗದಂತೆ ಜಾಗ್ರತೆ ವಹಿಸಿ, ಈ ಕುರಿತು ಯಾವುದೇ ಮಾಧ್ಯಮಗಳಿಂದ ಅಥವಾ ಸಾರ್ವಜನಿಕರಿಂದ ಯಾವುದೇ ಆರೋಪಗಳು ಬಾರದಂತೆ ನಿಗಾವಹಿಸುವುದು ಕಚೇರಿ ಮುಖ್ಯಸ್ಥರ ಜವಾಬ್ದಾರಿಯಾಗಿದೆ, ಲೋಪದೋಷಗಳು ಆಗದಂತೆ ಎಚ್ಚರಿಕೆ ವಹಿಸಬೇಕು. 

ಜಿಲ್ಲೆಯ ಎಲ್ಲಾ ಮನೆಗಳ ಮೇಲೆ ಆ.13 ರಂದು ಸೂರ್ಯೋದಯದ ನಂತರ ಬೆಳಿಗ್ಗೆ 8 ಗಂಟೆಯೊಳಗೆ ಧ್ವಜಾರೋಹಣ ಮಾಡಿ ಹಾಗೂ ಹಗಲು ರಾತ್ರಿ ನಿರಂತರವಾಗಿ ಧ್ವಜ ಹಾರಿಸಿ ಆ.15ರ ಸೂರ್ಯಾಸ್ತದ ವೇಳೆಗೆ ಇಳಿಸುವಂತೆ ಸೂಚಿಸಿದೆ. 

ತ್ರಿವರ್ಣ ಧ್ವಜವನ್ನು ಏರಿಸುವಾಗ ದ್ವಜದ ಹಸಿರು ಬಣ್ಣ ಕೆಳಗೆ ಇರುವಂತೆ ಕೇಸರಿ ಬಣ್ಣ ಮೇಲೆ ಇರುವಂತೆ ಹಾರಿಸುತ್ತಾ, ಧ್ವಜವನ್ನು ಯಾವಾಗಲೂ ಪೂರ್ಣ ಗೌರವ ಮತ್ತು ಉತ್ಸಾಹದಿಂದ ಶೀಘ್ರಗತಿಯಲ್ಲಿ ಏರಿಸಿ, ನಿಧಾನವಾಗಿ ಕೆಳಕ್ಕೆ ಇಳಿಸಬೇಕು. 

ರಾಷ್ಟ್ರಧ್ವಜವನ್ನು ಹಾರಿಸಿದ ನಂತರ ಜನಗಣ ಮನವನ್ನು ಹಾಡಲೇಬೇಕು ಹಾಗೂ ರಾಷ್ಟ್ರ ಧ್ವಜವು ನೆಲ ಮುಟ್ಟದಂತೆ ಜಾಗ್ರತೆ ವಹಿಸಬೇಕು. ತ್ರಿವರ್ಣ ಧ್ವಜ ಸಂಹಿತೆಯಂತೆ ಧ್ವಜಕ್ಕೆ ಅಲಂಕಾರ ಮಾಡುವಂತಿಲ್ಲ, ಯಾವುದೇ ಲೋಪವಾಗದಂತೆ, ಅವಮಾನ ಆಗದಂತೆ ಎಚ್ಚರಿಕೆ ವಹಿಸಬೇಕು.

ರಾಷ್ಟ್ರ ತ್ರಿವರ್ಣ ಧ್ವಜವನ್ನು ಹಾರಿಸುವ ಮುನ್ನ ಪರಿಶೀಲಿಸಿಕೊಳ್ಳಬೇಕು, ಹರಿದ ಅಥವಾ ಕೊಳಕಾದ ತ್ರಿವರ್ಣ ಧ್ವಜವನ್ನು ಹಾರಿಸುವಂತಿಲ್ಲ. ಹಾರಿಸಿದ ನಂತರ ಹರಿದಿದ್ದರೆ ಅಂತಹ ದ್ವಜವನ್ನು ಕೂಡಲೇ ತೆಗೆಯಬೇಕು. ಹಾಗೂ ರಾಷ್ಟ್ರಧ್ವಜಕ್ಕೆ ಸಮನಾದ ಅಥವಾ ಎತ್ತರದಲ್ಲಿ ಮತ್ತೊಂದು ಧ್ವಜವನ್ನು ಹಾರಿಸಬಾರದು.

ಆ.13 ರಿಂದ 15ರವರೆಗೆ ಧ್ವಜಾರೋಹಣ ನಡೆಸಿ ಇಳಿಸಿದ ಬಳಿಕ ಧ್ವಜವನ್ನು ಜೋಪಾನವಾಗಿ ಮನೆಯಲ್ಲಿ ಇಟ್ಟುಕೊಳ್ಳಬೇಕು.

ದಿ ಫ್ರೀವೆನ್ಸನ್ ಆಫ್ ಇನ್‍ಸಲ್ಟ್ಸ್ ಟು ನ್ಯಾಶನಲ್ ಹೊನರ್ ಆಕ್ಟ್ 1971 ಅಧಿನಿಯಮ 2 ರಂತೆ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಅಥವಾ ಇತರೇ ಸ್ಥಳಗಳಲ್ಲಿ ರಾಷ್ಟ್ರದ್ವಜವನ್ನು ಸುಡುವುದಾಗಲಿ, ಕೆಡಿಸುವುದಾಗಲಿ, ಕಾಲಡಿಯಲ್ಲಿ ಹಾಕುವುದಾಗಲಿ, ಹಾಳುಗೆಡುವುದಾಗಲಿ ಅಥವಾ ಅದಕ್ಕೆ ಯಾವುದೇ ತರಹದ ಅಗೌರವ ತೋರುವ ರೀತಿಯಲ್ಲಿ ನಡೆದು ಕೊಂಡರೆ ಹಾಗೂ ಮಾತು, ಬರಹ ಅಥವಾ ಇತರ ಕೃತ್ಯದ ಮೂಲಕ ಅಗೌರವ ತೋರಿದರೆ ಮತ್ತು ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡುವುದು ಹಾಗೂ ಧ್ವಜ ಸಂಹಿತೆಯ ನಿಬಂಧನೆಗಳನ್ನು ಉಲ್ಲಂಘಿಸುವ ರೀತಿಯಲ್ಲಿ ಬಳಸುವುದು ಕಂಡುಬಂದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸುವ ಶಿಕ್ಷೆಗೆ ಗುರಿ ಪಡಿಸಲಾಗುವುದು.

ಈ ನಿರ್ದೇಶನಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸುತ್ತಾ ಹರ್ ಘರ್ ತಿರಂಗಾ ಅಭಿಯಾನವನ್ನು ಜಿಲ್ಲೆಯಾದ್ಯಂತ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99