
ಬಿ ಜಿ ಮೋಹನ್ ದಾಸ್ ಪ್ರಶಸ್ತಿಗೆ ಪತ್ರಕರ್ತ ಸಂಶುದ್ದೀನ್ ಎಣ್ಮೂರು ಆಯ್ಕೆ
ಮಂಗಳೂರು: ಡಿಜಿಟಲ್ ಮಾಧ್ಯಮದಲ್ಲಿ ಉತ್ತಮ ವರದಿಗೆ ನೀಡಲಾಗುವ ಗಲ್ಫ್ ಕನ್ನಡಿಗ. ಕಾಮ್ ಸ್ಥಾಪಕ ಬಿ ಜಿ ಮೋಹನ್ ದಾಸ್ ಪ್ರಶಸ್ತಿ ಗೆ ಪತ್ರಕರ್ತ ಸಂಶುದ್ದೀನ್ ಎಣ್ಮೂರು ಆಯ್ಕೆಯಾಗಿದ್ದಾರೆ.
ಬಂಟ್ವಾಳ ಕಡೆಗೋಳಿ ತುಂಬೆಯ ನಿರತ ಸಾಹಿತ್ಯ ಸಂಪದ ಮತ್ತು ಗಲ್ಫ್ ಕನ್ನಡಿಗ.ಕಾಮ್ ಸಂಸ್ಥೆಯಿಂದ ನೀಡಲ್ಪಡುವ ಬಿ ಜಿ ಮೋಹನ್ ದಾಸ್ ಪ್ರಶಸ್ತಿಗೆ ಸಂಶುದ್ದೀನ್ ಎಣ್ಮೂರು ಆಯ್ಕೆಯಾಗಿದ್ದಾರೆ. ಸಂಶುದ್ದೀನ್ ಎಣ್ಮೂರು ಅವರ ವಾರ್ತಾಭಾರತಿ.ಕಾಮ್ ನಲ್ಲಿ ಪ್ರಕಟಗೊಂಡ ಕೊರಗುತ್ತಿರುವ ಕೊರಗರ ಬದುಕು ಎಂಬ ವಿಶೇಷ ವರದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ರೂ 5 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ.
ವಿದೇಶದಲ್ಲಿ ಮೊದಲ ಕನ್ನಡ ವೆಬ್ ಸೈಟ್ ಗಲ್ಫ್ ಕನ್ನಡಿಗ. ಕಾಮ್ ನ್ನು ಎರಡು ದಶಕಗಳ ಹಿಂದೆ ಆರಂಭಿಸಿದ್ದ ದಿವಂಗತ ಬಿ ಜಿ ಮೋಹನ್ ದಾಸ್ ಅವರ ಸ್ಮರಣಾರ್ಥ ಡಿಜಿಟಲ್ ಮಾಧ್ಯಮದಲ್ಲಿ ಅತ್ಯುತ್ತಮ ವರದಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.
ಸೆಪ್ಟೆಂಬರ್ 4 ರಂದು ಬೆಳಿಗ್ಗೆ 10 ಗಂಟೆಗೆ ಬಂಟ್ವಾಳ ತಾಲೂಕಿನ ಬಿ ಸಿ ರೋಡ್ ನ ಕೈಕುಂಜೆಯಲ್ಲಿರುವ ಕನ್ನಡ ಭವನದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಸಂಶುದ್ದೀನ್ ಎಣ್ಮೂರು ಅವರು ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಕೊಳ್ತಂಗೆರೆ ಯ ಎಂ.ಕೆ. ಯೂಸುಫ್ ಎಂಬವರ ಪುತ್ರರಾಗಿದ್ದಾರೆ. ವಾರ್ತಾಭಾರತಿ ಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕ, ವರದಿಗಾರ ನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.