UDUPI: ವಿಜಯ ನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯರಿಗೆ ಸೇರಿದ ಶಾಸನ ಪತ್ತೆ
Monday, June 13, 2022
ವಿಜಯ ನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯರಿಗೆ ಸೇರಿದ ಶಾಸನವೊಂದು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಪತ್ತೆಯಾಗಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಂದನವನ ಗ್ರಾಮದಲ್ಲಿ ಈ ಶಾಸನ ಪತ್ತೆಯಾಗಿದ್ದು, 15ನೆ ಶತಮಾನ ಕ್ಕೆ ಸೇರಿದ ಶಾಸಕ ಇದಾಗಿದೆ ಎನ್ನಲಾಗಿದೆ. ಶಾಸನವನ್ನು ಉಡುಪಿ ಪ್ರಾಚ್ಯಸಂಚಯ ಸಂಶೋಧನ ಕೇಂದ್ರದ ಅಧ್ಯಯನ ನಿರ್ದೇಶಕ ಪ್ರೊ. ಎಸ್.ಎ.ಕೃಷ್ಣಯ್ಯ ಮತ್ತು ನಿವೃತ್ತ ಉಪನ್ಯಾಸಕ ಕೆ. ಶ್ರೀಧರ ಭಟ್ ಅವರ ನೇತೃತ್ವದಲ್ಲಿ ಸೈಂಟ್ ಅಲೋಶಿಯಸ್ ಕಾಲೇಜಿನ ವಸ್ತುಸಂಗ್ರಹಾಲಯದ ನಿರ್ದೇಶಕ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಅಧ್ಯಯನ ಮಾಡಿದ್ದಾರೆ. ಶಾಸನವು ಸಂಜೀವ ಪ್ರಭು ಅವರಿಗೆ ಸೇರಿದ ಜಾಗದಲ್ಲಿ ಪತ್ತೆಯಾಗಿದ್ದು ಕಣ ಶಿಲೆಯಲ್ಲಿ ಕೊರೆಯಲ್ಪಟ್ಟಿದೆ. 5 ಅಡಿ ಎತ್ತರ ಮತ್ತು 2.5 ಅಡಿ ಅಗಲವಿರುವ ಈ ಶಾಸನದಲ್ಲಿ ಕನ್ನಡ ಲಿಪಿ ಮತ್ತು ಭಾಷೆಯ 38 ಸಾಲುಗಳನ್ನು, ಮೇಲ್ಭಾಗದಲ್ಲಿರುವ ವಾಮನ ಮೂರ್ತಿಯ ಇಕ್ಕೆಲಗಳಲ್ಲಿ ಶಂಖ-ಚಕ್ರ, ಸೂರ್ಯ-ಚಂದ್ರರ ಉಬ್ಬು ಕೆತ್ತನೆಯಿದೆ. ‘ಸ್ವಸ್ತಿ ಶ್ರೀ ಗಣಾಧಿಪತಯೆ ನಮ’ ಎಂಬ ಶ್ಲೋಕದ ತಲೆ ಬರಹವಿರುವ ಈ ಶಾಸನವು ಶಕವರುಷ 1442 ವರ್ತಮಾನ ಪ್ರಮಾಧಿ ಸಂವತ್ಸರದ ಶ್ರಾವಣ ಶುದ್ಧ 15 ಬುಧವಾರ ಅಂದರೆ ಕ್ರಿ. ಶ 1519 ಆಗಸ್ಟ್ 21 ಬುಧವಾರಕ್ಕೆ ಸೇರಿದೆ. ಈ ಕಾಲಮಾನವು ವಿಜಯನಗರ ತುಳುವ ದೊರೆ ಕೃಷ್ಣದೇವರಾಯನಿಗೆ ಸೇರಿದ್ದು, ಈ ಸಂದರ್ಭದಲ್ಲಿ ಬಾರಕೂರ ರಾಜ್ಯವನ್ನು ರತ್ನಪ್ಪ ಒಡೆಯನ ಕುಮಾರನಾದ ವಿಜಯಪ್ಪ ಒಡೆಯನು ಆಳ್ವಿಕೆ ನಡೆಸುತ್ತಿದ್ದ ಎಂಬುದು ಶಾಸನ ತಿಳಿಸುತ್ತದೆ.