UDUPI : ಉಡುಪಿ ಜಿಲ್ಲೆಯ ಮೊದಲ ಹೈಟೆಕ್ ಅಂಗನವಾಡಿ
Thursday, June 16, 2022
ಮೂಲಭೂತ ಸೌಕರ್ಯಗಳ ಕೊರತೆ ಇರೋ
ಸರ್ಕಾರಿ ಅಂಗನವಾಡಿಗಳಿಗೆ ಮಕ್ಕಳನ್ನು ಕಳುಹಿಸುದಕ್ಕೂ ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಸರ್ಕಾರಿ ಅಂಗನವಾಡಿಗೂ ಮಕ್ಕಳು ಬರುವಂತೆ ಆಗಬೇಕು ಉದ್ದೇಶದಿಂದ ಉಡುಪಿ ಜಿಲ್ಲೆಯಲ್ಲಿ ಕಾಪು ತಾಲೂಕಿನ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹೈಟೆಕ್ ಅಂಗನವಾಡಿ ನಿರ್ಮಾಣವಾಗಿ ಗಮನ ಸೆಳೆಯುತ್ತಿದೆ.
ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ದಾನಿಗಳ ಸಹಕಾರದಿಂದ ಸುಮಾರು 20.5 ಲಕ್ಷ ವೆಚ್ಚದಲ್ಲಿ, ದಿ| ಅಚ್ಯುತ ಕಾಮತ್ ಅವರು ದಾನವಾಗಿ ನೀಡಿದ 6 ಸೆಂಟ್ಸ್ ಜಾಗದಲ್ಲಿ ತೀರಾ ದುಸ್ಥಿತಿಯ 35 ವರ್ಷದ ಹಳೆಯ ಕಟ್ಟಡದಲ್ಲಿ ಈ ಕೇಂದ್ರವು ಕಾರ್ಯ ನಿರ್ವಹಿಸುತ್ತಿತ್ತು. ಅಪಾಯಕಾರಿ ಸ್ಥಿತಿ ಇದ್ದ ಅಂಗನವಾಡಿಗೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ಸರ್ಕಾರ ಸುಮಾರು 16.5 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಿಸಿಕೊಟ್ಟಿದೆ. ದೇಶ ವಿದೇಶಗಳಲ್ಲಿ ನೆಲೆಸಿರುವ ತನ್ನ ಸ್ನೇಹಿತರು, ಪರಿಸರದ ಸಂಘಸಂಸ್ಥೆಗಳು ಹಾಗೂ ವಾಟ್ಸಾಪ್ ಸಂದೇಶಕ್ಕೆ ಸ್ಪಂದಿಸಿದ ದಾನಿಗಳ ಸಹಕಾರದಿಂದ, ಸುಮಾರು 4 ಲ.ರೂ. ವೆಚ್ಚದಲ್ಲಿ ಅಂಗನವಾಡಿ ಕೇಂದ್ರಕ್ಕೆ ಹೈಟೆಕ್ ಸ್ಪರ್ಶ ನೀಡಲಾಗಿದೆ.
ಕೇಂದ್ರದಲ್ಲಿ 30 ಮಕ್ಕಳಿದ್ದು, ಅಂಗನವಾಡಿ ಸುತ್ತಲೂ ಆವರಣ ಗೋಡೆ, ಕೊಠಡಿಗೆ ಹವಾ ನಿಯಂತ್ರಿತ ವ್ಯವಸ್ಥೆ, ಗೋಡೆ ಬರಹ, ಕಾರ್ಟೂನ್ ಚಿತ್ರಗಳು, ಕೇಬಲ್ ಟಿವಿ ಸಂಪರ್ಕದೊಂದಿಗೆ ಪುಟಾಣಿಗಳಿಗೆ ಕಾರ್ಟೂನ್ ನೋಡುವ ಅವಕಾಶ ಕಲ್ಪಿಸಲಾಗಿದೆ. ಪುಟಾಣಿಗಳಿಗಾಗಿ ನೆರಳಿರುವ ಪ್ರತ್ಯೇಕ ಜಾರುಬಂಡಿ, ಸುಮಾರು 800 ಚ.ಅಡಿ ಚಪ್ಪರ, 1000 ಚ.ಅಡಿಯ ಇಂಟರ್‌ಲಾಕ್ ನಿರ್ಮಿಸಲಾಗಿದೆ. ಮಕ್ಕಳ ಹೆತ್ತವರಿಗಾಗಿ ವಿರಮಿಸಲು ಕಾಂಕ್ರೀಟ್ ಬೆಂಚುಗಳು, ಎರಡು ಶೌಚಾಲಯ, 24 ಗಂಟೆಗಳ ಕುಡಿಯುವ ನೀರಿನ ವ್ಯವಸ್ಥೆಯೊಂದಿಗೆ ವಾಟರ್ ಪ್ಯೂರಿಫೈಯರ್, ಸೋಫಾ, ಚಪ್ಪಲ್ ಸ್ಟಾಂಡ್, ಬ್ಯಾಗ್ ಸ್ಟಾಂಡ್, ಮಕ್ಕಳಿಗಾಗಿ ಸಣ್ಣ ಕುರ್ಚಿಗಳು , ಸಮವಸ್ತ್ರ, ಟೇಬಲ್ ಮತ್ತು ಕುರ್ಚಿ ಹಾಗೂ ಆವರಣದಲ್ಲಿ ಸೋಲಾರ್‌ವಿದ್ಯುತ್ ದೀಪದ ವ್ಯವಸ್ಥೆ ಕಲ್ಪಿಸಲಾಗಿದೆ.