
UDUPI : 81ರ ವೃದ್ಧೆಯ ಪ್ರಕರಣವನ್ನು ಅಜ್ಜಿ ಕುಳಿತ ರಿಕ್ಷಾದ ಬಳಿ ಬಂದು ಬಂದು ಇತ್ಯರ್ಥಗೊಳಿಸಿದ ನ್ಯಾಯಾಧೀಶರು
ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಿ ಒಂದೇ ದಿನ 30,773 ಪ್ರಕರಣ ಇತ್ಯರ್ಥ ಪಡಿಸಿದರು.
ಈ ವೇಳೆ ಕೋರ್ಟ್ ಮೆಟ್ಟಿಲು ಹತ್ತಲಾಗದೆ ರಿಕ್ಷಾದಲ್ಲೇ ಕುಳಿತ್ತಿದ್ದ 81 ವರ್ಷ ಪ್ರಾಯದ ವೃದ್ಧೆಯ ಪ್ರಕರಣವನ್ನು ನ್ಯಾಯಾಧೀಶರು ರಿಕ್ಷಾದ ಬಳಿ ತೆರಳಿ ಅಲ್ಲಿಯೇ ಇತ್ಯರ್ಥಗೊಳಿಸಿದರು. 2011 ರ ಅಸಲು ದಾವೆ ಪ್ರಕರಣದಲ್ಲಿ ಲೋಕ್‌ಅದಾಲತ್‌ನಲ್ಲಿ ಭಾಗಿಯಾಗಲು ಆಟೋ ರಿಕ್ಷಾದಲ್ಲಿ ಬಂದ 81 ವರ್ಷದ ವೃದ್ಧೆ ದೇವಕಿ ಶೆಡ್ತಿ ತಮ್ಮ ಮಗಳಾದ ಜಯಂತಿಯವರಿಗೆ ಜಿ.ಪಿ.ಎ. ನೀಡಿದ್ದರು. ಅವರು ನ್ಯಾಯಾಲಯದ ಮೆಟ್ಟಿಲು ಹತ್ತಲಾಗದೇ ಆಟೋದಲ್ಲಿ ಕುಳಿತ್ತಿದ್ದರು. ಆ ಸಂದರ್ಭದಲ್ಲಿ 4ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಜೀತು ಆರ್.ಎಸ್., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್., ಸಂಧಾನಕಾರರಾದ ನ್ಯಾಯವಾದಿ ಮಿತೇಶ್ ಶೆಟ್ಟಿ ಹಾಗೂ ಉಭಯ ಕಕ್ಷಿದಾರರ ನ್ಯಾಯವಾದಿಗಳು ದೇವಕಿ ಶೆಡ್ತಿರವರ ಬಳಿ ಬಂದು ಜಿ.ಪಿ.ಎ. ನೀಡಿದ್ದರ ಬಗ್ಗೆ ಪರಿಶೀಲಿಸಿದರು. ನ್ಯಾಯಾಲಯದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮುಂಬಯಿಯಲ್ಲಿದ್ದ ನಾಲ್ಕು ಜನ ಕಕ್ಷಿದಾರರ ಭಾಗಿಯಾದ ಅನಂತರ ಪ್ರಕರಣವನ್ನು ಇತ್ಯರ್ಥಪಡಿಸಲಾಯಿತು.