ಉಡುಪಿಯ ಜಡ್ಕಲ್‌ನಲ್ಲಿ DENGUE ಕಾಟ; ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಪಣ
Wednesday, May 25, 2022
ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ವ್ಯಾಪ್ತಿಯ ಕೊಲ್ಲೂರು, ಮುದೂರು, ಜಡ್ಕಲ್ ಪ್ರದೇಶಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿದೆ.
ಈ ಹಿನ್ನಲೆಯಲ್ಲಿ ಈ ಪ್ರದೇಶಗಳ ಕುರಿತು ಎಚ್ಚರಿಕೆ ವಹಿಸಿರುವ ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಡೆಂಗ್ಯೂ ಪೀಡಿತರಿಗಾಗಿ ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ 60 ಹಾಸಿಗೆಗಳ ವಿಶೇಷ ವಾರ್ಡ್ ಸಿದ್ಧಪಡಿಸಲಾಗಿದೆ.
ಮುದೂರು ಮತ್ತು ಜಡ್ಕಲ್‌ನಲ್ಲಿ ನಿರಂತರ ನಿಗಾ ಇರಿಸಲು ಆರೋಗ್ಯಾಧಿಕಾರಿಗಳನ್ನು ಒಳಗೊಂಡ ೧೩ ತಂಡಗಳನ್ನು ರಚಿಸಿದ್ದು, ಈ ತಂಡದ ಸದಸ್ಯರು ಪ್ರತಿದಿನ ಮನೆಮನೆಗೆ ತೆರಳಿ ಅರಿವು ಮೂಡಿಸುತ್ತಿದ್ದಾರೆ. ಈ ಎರಡೂ ಗ್ರಾಮಗಳ ಮನೆಗಳಿಗೆ ಉಚಿತವಾಗಿ ಸೊಳ್ಳೆ ಪರದೆ, ತಲಾ 2 ಬಾಟಲ್ ಡಿಎಂಪಿ ತೈಲ ವಿತರಿಸಲಾಗಿದೆ.
ಇದಲ್ಲದೇ ಇಲ್ಲಿನ ಡೆಂಗ್ಯೂ ಪೀಡಿತರನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ತುರ್ತು ಅಗತ್ಯಕ್ಕಾಗಿ 2 ಆಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿದ್ದು, ಗ್ರಾಮದಲ್ಲಿ ಪ್ರತಿನಿತ್ಯವು ಕೂಡ ಫಾಗಿಂಗ್ ಮಾಡಲಾಗುತ್ತಿದೆ. ಬೀದಿ ನಾಟಕ, ಸಾಕ್ಷ್ಯಚಿತ್ರ ಪ್ರದರ್ಶನಗಳ ಮೂಲಕ ಅರಿವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಡೆಂಗ್ಯೂ ನಿಯಂತ್ರಣ ಕುರಿತು ಮಾಹಿತಿ ನೀಡಿ, ಪೋಷಕರ ಮೂಲಕ ಅನುಷ್ಠಾನ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ.