UDUPI- ರೈಫಲ್ ನಿಂದ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಹೆಡ್ ಕಾನ್ ಸ್ಟೇಬಲ್
Friday, April 29, 2022
ಉಡುಪಿಯಲ್ಲಿ ಹೆಡ್ ಕಾನ್ ಸ್ಟೇಬಲ್ ವೊಬ್ಬರು ಕರ್ತವ್ಯದಲ್ಲಿ ಇರುವಾಗಲೇ ರೈಫಲ್ ನಿಂದ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಜೇಶ್ ಕುಂದರ್ ಆತ್ಮಹತ್ಯೆ ಮಾಡಿಕೊಂಡವರು. ಎಸೆಸೆಲ್ಸಿ ಪರೀಕ್ಷೆ ಮೌಲ್ಯಮಾಪನ ಕೇಂದ್ರದ ಭದ್ರತೆಗೆ ಇವರನ್ನು ನಿಯೋಜಿಸಲಾಗಿತ್ತು. ರಾತ್ರಿಯಿಂದಲೇ ಕರ್ತವ್ಯನಿರತರಾಗಿದ್ದ ಇವರು ಬೆಳಗಿನಜಾವ ತನ್ನ ಕರ್ತವ್ಯ ಕ್ಜೆಂದು ನೀಡಿದ್ದ ರೈಫಲ್ನಿಂದ ಗುಂಡು ಹಾರಿಸಿಕೊಂಡು ಅಸುನೀಗಿದ್ದಾರೆ.
ತಿಂಗಳ ಹಿಂದೆ ಇವರು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರತರಾಗಿದ್ದಾಗ ಸಹೋದ್ಯೋಗಿಗಳೊಂದಿಗೆ ಜಗಳವಾಡಿದ್ದರು. ಮೂವರು ಪೊಲೀಸ್ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿಯೂ ನಡೆದಿತ್ತು. ಇಲಾಖೆಯಲ್ಲಿನ ಡ್ಯೂಟಿ ಟೈಮ್ ಹಾಗೂ ಸೀನಿಯಾರಿಟಿ ಸಂಬಂಧ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಈ ಗಲಾಟೆಗೆ ಸಂಬಂಧಿಸಿದಂತೆ ರಾಜೇಶ್ ಸೇರಿದಂತೆ ಮೂವರನ್ನು ಅಮಾನತಿನಲ್ಲಿ ಇರಿಸಲಾಗಿತ್ತು.
ಅಮಾನತ್ತಿನ ಅವಧಿ ಪೂರೈಸಿಕೊಂಡು ಗುರುವಾರವಷ್ಟೇ ರಾಜೇಶ್ ಕುಂದರ್ ಕರ್ತವ್ಯಕ್ಕೆ ಹಾಜರಾಗಿದ್ದರು. ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಆಗಿರುವ ಇವರನ್ನು ಮಲ್ಪೆ ಠಾಣೆಯ ಮೂಲಕ ಆದಿಉಡುಪಿ ಶಾಲೆಯ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಕರ್ತವ್ಯದ ವೇಳೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ..