DUBAIಯಲ್ಲಿ ಉದ್ಯೋಗ ನೀಡುವುದಾಗಿ ನಂಬಿಸಿ ಈ ತಂಡ ಯುವತಿಯರನ್ನು ಮಾಡಿದ್ದೇನು?
Friday, April 8, 2022
ಬೆಂಗಳೂರು: ವಿದೇಶದಲ್ಲಿ ಉದ್ಯೋಗದ ಆಮಿಷವೊಡ್ಡಿ ದುಬೈನ ಡ್ಯಾನ್ಸ್ ಬಾರ್‌ಗಳಿಗೆ ಯುವತಿಯರನ್ನು ಸಾಗಿಸುತ್ತಿದ್ದ ಮಾನವ ಕಳ್ಳ ಸಾಗಾಣಿಕೆ ಜಾಲವೊಂದನ್ನು ಭೇದಿಸಿದ ಸಿಸಿಬಿ, ಈ ಸಂಬಂಧ ಈವೆಂಟ್ ಮ್ಯಾನೇಜ್‌ಮೆಂಟ್ ಆಯೋಜಕ, ಡಿಜೆ ಹಾಗೂ ಆರ್ಟಿಸ್ಟ್ ಏಜೆಂಟ್ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ.
ಬಸವರಾಜು ಕಳಸದ್, ಆದರ್ಶ, ತಮಿಳುನಾಡಿನ ಸೇಲಂನ ರಾಜೇಂದ್ರ ನಾಚಿಮುತ್ತು, ಮಾರಿಯಪ್ಪನ್, ಟಿ.ಅಶೋಕ್, ಎಸ್.ರಾಜೇವ್ ಗಾಂಧಿ ಹಾಗೂ ಜೆ.ಪಿ.ನಗರದ ಆರ್.ಚಂದ್ರು ಬಂಧಿತರು. ಆರೋಪಿಗಳ ಜೊತೆ ಇದ್ದ 17 ಮಹಿಳೆಯರನ್ನು ರಕ್ಷಿಸಲಾಗಿದೆ. ಅಲ್ಲದೆ 7 ಮೊಬೈಲ್‌ಗಳು ಹಾಗೂ .1.06 ಲಕ್ಷ ಜಪ್ತಿಯಾಗಿದೆ.
ಈ ಆರೋಪಿಗಳು ಚಲನಚಿತ್ರಗಳಿಗೆ ಸಹನಟ-ನಟಿಯರು, ನೃತ್ಯಗಾರರನ್ನು ಪೂರೈಸುವ ವ್ಯವಹಾರ ಮತ್ತು ಮನರಂಜನಾ ಕಾರ್ಯಕ್ರಮಗಳ ಆಯೋಜನೆ ದಂಧೆಯಲ್ಲಿ ತೊಡಗಿದ್ದರು. ಬಡತನದ ಹಿನ್ನೆಲೆಯ ಯುವತಿಯರನ್ನು ಪರಿಚಯಿಸಿಕೊಂಡು ಅವರಿಗೆ ವಿದೇಶದಲ್ಲಿ ಕೆಲಸಕ್ಕೆ ಸೇರಿದರೆ ಕೈ ತುಂಬಾ ಸಂಪಾದನೆ ಮಾಡಬಹುದು ಎಂದು ಆಮಿಷವೊಡ್ಡುತ್ತಿದ್ದರು. ತಮ್ಮ ಮಾತಿಗೆ ಒಪ್ಪಿದ ಯುವತಿಯರಿಗೆ ದುಬೈನಲ್ಲಿ ಕೆಲಸ ಕೊಡಿಸುತ್ತೇವೆ ಎಂದು ಹೇಳಿ ಕಳುಹಿಸುತ್ತಿದ್ದರು. ಬಳಿಕ ದುಬೈನಲ್ಲಿ ಡ್ಯಾನ್ಸ್ ಬಾರ್‌ಗಳಲ್ಲಿ ಕೆಲಸಗಳಿಗೆ ಮಾತ್ರವಲ್ಲದೆ ಅನೈತಿಕ ಚಟುವಟಿಕೆಗಳಿಗೆ ಆ ಮಹಿಳೆಯರನ್ನು ಬಳಸಿಕೊಳ್ಳುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.