-->

ಆಧಾರ್ ಕಾರ್ಡ್ ನಲ್ಲಿ ‌ಮಗುವಿನ ಹೆಸರಿನ ಬದಲಿಗೆ ನಮೂದಾಯಿತು 'ಮಧುವಿನ‌ ಐದನೇ ಮಗು'!: ಸಿಬ್ಬಂದಿ ನಿರ್ಲಕ್ಷ್ಯ

ಆಧಾರ್ ಕಾರ್ಡ್ ನಲ್ಲಿ ‌ಮಗುವಿನ ಹೆಸರಿನ ಬದಲಿಗೆ ನಮೂದಾಯಿತು 'ಮಧುವಿನ‌ ಐದನೇ ಮಗು'!: ಸಿಬ್ಬಂದಿ ನಿರ್ಲಕ್ಷ್ಯ

ಬದೌನ್(ಉತ್ತರ ಪ್ರದೇಶ): ಆಧಾರ್ ಕಾರ್ಡ್​ಗಳು ಕಡ್ಡಾಯವಾಗಿರೋದು ಎಲ್ಲರಿಗೂ ಗೊತ್ತಿರುವಂತದ್ದೇ. ಆದರೆ ಇಂತಹ ಆಧಾರ್ ಕಾರ್ಡ್ ಗಳಲ್ಲಿ ದೋಷಗಳಿರುವುದು ವರದಿಯಾಗುತ್ತಲೇ ಇರುತ್ತವೆ. ಒಮ್ಮೊಮ್ಮೆ ಈ ತಪ್ಪುಗಳನ್ನು ಆಧಾರ್ ಸಿಬ್ಬಂದಿ ಬೇಕೆಂತಲೇ ಮಾಡುತ್ತಾರೇನೋ ಎಂಬ ಅನುಮಾನಗಳು ಕಾಡುತ್ತವೆ. ಅದಕ್ಕೊಂದು ಸ್ಪಷ್ಟ ಉದಾಹರಣೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿದೆ. 

ಉತ್ತರ ಪ್ರದೇಶದ ಬಿಲ್ಸಿ ತಹಸಿಲ್‌ನ ರಾಯ್‌ಪುರ ಗ್ರಾಮದ ದಿನೇಶ್ ಹಾಗೂ ಮಧು ದಂಪತಿ ತಮ್ಮ ಪುತ್ರಿ ಆರತಿಯನ್ನು ಶಾಲೆಗೆ ಸೇರಿಸಲು ಕರೆದೊಯ್ದಾಗ ಆಕೆಯ ಆಧಾರ್ ಕಾರ್ಡ್ ನಲ್ಲಿದ್ದ ದೋಷ ಬೆಳಕಿಗೆ ಬಂದಿದೆ. ದಂಪತಿ ತಮ್ಮ ಪುತ್ರಿಯ ಆಧಾರ್​ ಕಾರ್ಡ್​ ನೀಡಿದಾಗ ಅದರಲ್ಲಿ ಆರತಿ ಎಂಬ ಹೆಸರಿನ ಬದಲಿಗೆ 'ಮಧುವಿನ ಐದನೇ ಮಗು' ಎಂದು ನಮೂದಾಗಿತ್ತು. ಇದನ್ನು ಕಂಡು ಹಾಸ್ಯ ಮಾಡಿರುವ ಶಿಕ್ಷಕಿ ಆಧಾರ್ ಕಾರ್ಡ್ ಅನ್ನು ತಿದ್ದುಪಡಿ ಮಾಡಿಸಿಕೊಂಡು ಬರುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ ಈ ಆಧಾರ್ ಕಾರ್ಡ್​ನಲ್ಲಿ 12 ಅಂಕೆಗಳ ಆಧಾರ್ ನಂಬರ್ ಕೂಡಾ ಇಲ್ಲ ಅನ್ನೋದು ಮತ್ತೊಂದು ಅಚ್ಚರಿಯ ವಿಚಾರ. ಆದ್ದರಿಂದ ಮಗುವಿನ ಶಾಲಾ ದಾಖಲಾತಿ ಮಾಡದೆ ನಿರಾಕರಿಸಲಾಗಿದೆ ಎನ್ನಲಾಗಿದೆ.

ಈ ಕುರಿತು ಬಾಲಕಿಯ ತಂದೆ ದಿನೇಶ್ ಮಾತನಾಡಿ, 'ಶಾಲೆಯಲ್ಲಿ ಆಧಾರ್ ಕಾರ್ಡ್ ದೋಷದಿಂದ ನಾವು ನಗೆಪಾಟಲಿಗೆ ಒಳಗಾಗಬೇಕಾಯಿತು. ನಾನು ಬಡವನಾಗಿದ್ದು, ಐವರು ಮಕ್ಕಳೊಂದಿಗೆ ಗುಡಿಸಲಿನಲ್ಲಿ ವಾಸಿಸುತ್ತಿದ್ದೇನೆ. ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಅನ್ನೋದು ನನ್ನ ಮಹದಾಸೆ. ಆದರೆ ಆಧಾರ್ ಕಾರ್ಡ್‌ನಲ್ಲಿನ ವ್ಯತ್ಯಾಸದಿಂದ ಹೆಣ್ಣು ಮಗುವಿಗೆ ಶಾಲೆಗೆ ಪ್ರವೇಶ ಸಿಗುತ್ತಿಲ್ಲ' ಎಂದು ಅಲವತ್ತುಕೊಂಡಿದ್ದಾರೆ. ಮಧು ಹಾಗೂ ದಿನೇಶ್ ದಂಪತಿ ಅನಕ್ಷರಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಬದೌನ್ ಜಿಲ್ಲಾ ಮ್ಯಾಜಿಸ್ಟ್ರೇಟ್ ದೀಪಾ ರಂಜನ್ ಪ್ರತಿಕ್ರಿಯೆ ನೀಡಿ, 'ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಲ್ಲಿ ಆಧಾರ್ ಕಾರ್ಡ್ ಮಾಡಲಾಗುತ್ತಿದೆ. ಸಿಬ್ಬಂದಿ ನಿರ್ಲಕ್ಷ್ಯದಿಂದ ಈ ತಪ್ಪು ನಡೆದಿದೆ. ಹೀಗಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗುವುದು. ಇಂತಹ ನಿರ್ಲಕ್ಷ್ಯ ತೋರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದರು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99