
ನ್ಯಾಯಾಧೀಶರ ಕೊಲೆ ಪ್ರಕರಣ: ವಾಟ್ಸ್ಆ್ಯಪ್ ಮುಖ್ಯಸ್ಥರನ್ನೇ ಆರೋಪಿಯನ್ನಾಗಿ ಮಾಡಲು ಹೈಕೋರ್ಟ್ ಆದೇಶ
Monday, March 28, 2022
ಹೊಸದಿಲ್ಲಿ: ಕಳೆದ ವರ್ಷ ನಡೆದಿರುವ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರೋರ್ವರ ಕೊಲೆಗೆ ಸಂಬಂಧಿಸಿದಂತೆ ವಾಟ್ಸ್ಆ್ಯಪ್ ಮುಖ್ಯಸ್ಥರನ್ನೇ ಆರೋಪಿಯನ್ನಾಗಿಸುವಂತೆ ಜಾರ್ಖಂಡ್ ಹೈಕೋರ್ಟ್ ಶುಕ್ರವಾರ ಸಿಬಿಐಗೆ ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಾ.ರವಿ ರಂಜನ್ ಹಾಗೂ ನ್ಯಾಯಮೂರ್ತಿ ಸುಜಿತ್ ನಾರಾಯಣ ಪ್ರಸಾದ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಈ ಪ್ರಕರಣದಲ್ಲಿ ವ್ಯಾಟ್ಸ್ ಆ್ಯಪ್ ಮುಖ್ಯಸ್ಥರನ್ನೇ ಆರೋಪಿಯನ್ನಾಗಿ ಮಾಡುವಂತೆ ಸಿಬಿಐಯನ್ನು ಸೂಚನೆ ನೀಡಿದೆ. ಅಲ್ಲದೆ ಫೇಸ್‌ಬುಕ್ ಮಾಲಿಕತ್ವದ ಕಂಪೆನಿಗೆ ನೋಟಿಸ್ ನೀಡಿದೆ.
ಪ್ರಕರಣದಲ್ಲಿ ಬಂಧಿಸಲಾಗಿರುವ ಇಬ್ಬರು ಆರೋಪಿಗಳ ವ್ಯಾಟ್ಸ್ಆ್ಯಪ್ ಚಾಟ್ ಗಳ ವಿವರಗಳನ್ನು ವ್ಯಾಟ್ಸ್ ಆ್ಯಪ್ ಕಂಪೆನಿಯಿಂದ ಕೋರಲಾಗಿತ್ತು. ಆದರೆ ವ್ಯಾಟ್ಸ್ ಆ್ಯಪ್ ಮುಖ್ಯಸ್ಥರು ಭದ್ರತೆ ಹಾಗೂ ಗೌಪ್ಯತೆಯ ನೀತಿಗಳನ್ನು ಉಲ್ಲೇಖಿಸಿ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ ಎಂದು ಸಿಬಿಐ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು.
ನ್ಯಾಯಾಧೀಶರ ಸಾವಿನ ಬಳಿಕ ನ್ಯಾಯಪೀಠವು ಹೈಕೋರ್ಟ್ ಸ್ವಯಂಪ್ರೇರಿತವಾಗಿ ಆರಂಭಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನಡೆಸಿತ್ತು. ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಉತ್ತಮ್ ಆನಂದ್(49) ಜುಲೈ 28, 2021 ರಂದು ಜಾಗಿಂಗ್ ಮಾಡಲು ಹೊರಟಿದ್ದಾಗ ಆಟೋರಿಕ್ಷಾವೊಂದು ಢಿಕ್ಕಿ ಹೊಡೆದು ಮೃತಪಟ್ಟಿದ್ದರು.