ಫೋನ್ ಕರೆಯಲ್ಲಿ ಕಿತ್ತಾಡಿಕೊಂಡ ಪ್ರೇಮಿಗಳು: ಮುಂದಾಗಿದ್ದೇ ಭಾರೀ ದುರಂತ
Saturday, March 26, 2022
ಪಟನಾ: ಸಣ್ಣ ವಿಚಾರವೊಂದಕ್ಕೆ ಫೋನ್ ಕರೆಯಲ್ಲಿ ಕಿತ್ತಾಡಿಕೊಂಡ ಪ್ರೇಮಿಗಳಿಬ್ಬರು ಸಾವಿನತ್ತ ಪ್ರಯಾಣ ಬೆಳೆಸಿರುವ ದುರಂತವೊಂದು ನಡೆದಿದೆ. ಬಿಹಾರ ರಾಜ್ಯದದ ಮುಜಾಫರ್‌ಪುರ ಪ್ರದೇಶದಲ್ಲಿ ಪ್ರೇಯಸಿ ನೇಣಿಗೆ ಶರಣಾದರೆ, ಪ್ರಿಯಕರ ರಾಜಸ್ಥಾನದ ಜೈಪುರದಲ್ಲಿರುವ ಎಂಟು ಅಂತಸ್ತಿನ ಕಟ್ಟಡದಿಂದ ಜಿಗಿದು ಪ್ರಾಣ ಬಿಟ್ಟಿದ್ದಾನೆ.
ಅಂಜಲಿ ಜೈಸ್ವಾಲ್ (23) ಹಾಗೂ ವಿವೇಕ್ ಕುಮಾರ್ (26) ಆತ್ಮಹತ್ಯೆಗೆ ಶರಣಾಗಿರುವ ಪ್ರೇಮಿಗಳು. ಮುಜಾಫರ್ಪುರದ ನಿವಾಸಿ ಅಂಜಲಿ ಹಾಗೂ ನೀಮ್ ಚೌಕ್ ಶಂಕರಪುರಿ ನಿವಾಸಿ ವಿವೇಕ್ ಪರಸ್ಪರ ಪ್ರೇಮಿಸುತ್ತಿದ್ದರು. ಇಬ್ಬರೂ 9ನೇ ತರಗತಿಯಿಂದಲೂ ಪ್ರೀತಿಯ ಬಲೆಗೆ ಬಿದ್ದಿದ್ದರು. ಸುಮಾರು 10 ವರ್ಷಗಳ ಈ ಪ್ರೀತಿಯಲ್ಲಿ ಇಬ್ಬರ ಮಧ್ಯೆ ಯಾವುದೇ ಗಲಾಟೆಗಳು ನಡೆದಿರಲಿಲ್ಲ. ಎಲ್ಲವೂ ಸರಿಯಾಗಿಯೇ ಸಾಗುತ್ತಿತ್ತು. 4 ವರ್ಷಗಳ ಹಿಂದೆ ವಿವೇಕ್ ಜೈಪುರಕ್ಕೆ ಇಂಜಿನಿಯರಿಂಗ್ ಮಾಡಲೆಂದು ತೆರಳಿದ್ದರು. ಆದರೂ ಇಬ್ಬರೂ ದೂರ ದೂರದಲ್ಲಿದ್ದರು ಪರಸ್ಪರ ಸಂಪರ್ಕದಲ್ಲಿದ್ದರು. ಇತ್ತ ಅಂಜಲಿ ಚಾರ್ಟೆಡ್ ಅಕೌಂಟೆಂಟ್ಗೆ ಸಿದ್ಧತೆ ನಡೆಸುತ್ತಿದ್ದರು.
ಈ ನಡುವೆ ಕೆಲವು ದಿನಗಳಿಂದ ಇಬ್ಬರ ನಡುವೆ ಯಾವುದೋ ಕಾರಣಕ್ಕೆ ಬಿರುಕು ಮೂಡಿತ್ತು. ಇಬ್ಬರ ನಡುವಿನ ಬಿರುಕು ದೊಡ್ಡದಾಗಿರುವ ಹಿನ್ನೆಲೆಯಲ್ಲಿ ಇಬ್ಬರ ಕಾಮನ್ ಫ್ರೆಂಡ್ ಬಿರುಕನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದನು. ಮೂವರು ಕೂಡ ಕಾನ್ಫರೆನ್ಸ್ ಕಾಲ್ ಮೂಲಕ ಮಾತನಾಡುತ್ತಿದ್ದರು. ಈ ವೇಳೆ ಅಂಜಲಿ ಹಾಗೂ ವಿವೇಕ್ ಮಧ್ಯೆ ದಿಢೀರ್ ಜಗಳವಾಗಿದೆ. ಅದು ತಾರಕಕ್ಕೇರಿದೆ. ಆಗ ವಿವೇಕ್ ತಕ್ಷಣ ಕರೆ ಕಡಿತಗೊಳಿಸಿ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿದ್ದಾನೆ.
ಇದಾದ ಮಾರನೇ ದಿನ ಅಂದರೆ, ಗುರುವಾರ ಬೆಳಗ್ಗೆ ಫೋನ್ ಸ್ವಿಚ್ ಆನ್ ಮಾಡಿದಾಗ ಅಂಜಲಿ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ವಿವೇಕ್ಗೆ ತಿಳಿದು ಬರುತ್ತದೆ. ಪರಿಣಾಮ ಆತನಿಗೆ ಭಾರೀ ಆಘಾತವಾಗಿದ್ದು, ಅಂಜಲಿ ಸಾವಿನಿಂದ ಹೊರಬರಲಾಗದೇ 8ನೇ ಅಂತಸ್ತಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುಜಾಫರ್‌ಪುರ ಪೊಲೀಸರು ಅಂಜಲಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮತ್ತೊಂದೆಡೆ, ವಿವೇಕ್ ಸಾವಿನ ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ವಿವೇಕ್ ಕುಟುಂಬ ಜೈಪುರಕ್ಕೆ ತೆರಳಿದೆ.
ವಿವೇಕ್ ಚಿಕ್ಕಪ್ಪ ಹೇಳುವ ಪ್ರಕಾರ, ಮೂರು ವರ್ಷಗಳ ಹಿಂದೆ ಇಬ್ಬರ ಪ್ರೇಮ ಪ್ರಕರಣದ ಬಗ್ಗೆ ಕುಟುಂಬಕ್ಕೆ ತಿಳಿದಿತ್ತು. ಆದರೆ ಇಂತಹ ದುರಂತ ಅಂತ್ಯವನ್ನು ಊಹಿಸಲು ಸಹ ಸಾಧ್ಯವಾಗಲಿಲ್ಲ. ಅಂಜಲಿಯನ್ನು ಸೊಸೆಯನ್ನಾಗಿ ಸ್ವೀಕರಿಸಲು ನಾವು ರೆಡಿಯಾಗಿದ್ದೆವು, ಆದರೆ, ಅಷ್ಟರಲ್ಲಿ ದುರಂತ ನಡೆದು ಹೋಗಿದೆ ಎಂದು ಕಂಬನಿ ಮಿಡಿದಿದ್ದಾರೆ.