ಪುತ್ರನ ಚಿಕಿತ್ಸೆಗಾಗಿ ಮತಾಂತರವಾಗಲು ಮುಂದಾದ ಕುಟುಂಬ: ಅಪರೂಪದ ಥಲಸಿಮೆಯಾ ರೋಗದಿಂದ ಬಲುತ್ತಿರುವ ಮಗುವನ್ನು ಪಾರು ಮಾಡಲು ಮತಾಂತರದ ನಿರ್ಧಾರ
Saturday, March 26, 2022
ವಿಜಯಪುರ: ಮೂರು ವರ್ಷದ ಮಗುವಿನ ಚಿಕಿತ್ಸೆಗಾಗಿ ಕುಟುಂಬವೊಂದು ಮತಾಂತರವಾಗಲು ನಿರ್ಧರಿಸಿರುವ ಘಟನೆಯೊಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿ ನಡೆದಿದೆ.
ಥಲಸಿಮೆಯಾ(ರಕ್ತ ಹೀನತೆ) ರೋಗದಿಂದ ಬಳಲುತ್ತಿರುವ ಮಗು ಕಾರ್ತಿಕ್(3) ಚಿಕಿತ್ಸೆಗಾಗಿ ಪೋಷಕರು ಈಗಾಗಲೇ 2 ಲಕ್ಷ ರೂ. ಖರ್ಚು ಮಾಡಿ ಚಿಕಿತ್ಸೆ ನೀಡಿದ್ದಾರೆ. ಆದರೆ ಇದೀಗ ಮಗುವಿನ ಶಸ್ತ್ರಚಿಕಿತ್ಸೆಗೆ ಸುಮಾರು 10 ಲಕ್ಷ ರೂ. ಖರ್ಚಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಹಣವಿಲ್ಲದೆ ಪರದಾಡುತ್ತಿರುವ ಕುಟುಂಬ ಚಿಕಿತ್ಸೆಗಾಗಿ ಹಿಂದೂ ಧರ್ಮ ಬಿಟ್ಟು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ನಿರ್ಧರಿಸಿದೆ.
ಪ್ರತಿ ತಿಂಗಳು ಮಗುವಿಗೆ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆಯಲ್ಲಿ ಕುಟುಂಬವಿದ್ದು, ಅದಕ್ಕಾಗಿ ಸಾಕಷ್ಟು ವೆಚ್ಛ ತಗಲುತ್ತದೆ. ಹುಟ್ಟಿದ ಮೂರು ತಿಂಗಳಿನಿಂದ ಮಗುವಿಗೆ ಡಯಾಲಿಸಿಸ್ ಮೂಲಕ ರಕ್ತ ಹಾಕಿಸಲಾಗುತ್ತಿದೆ. ಈವರೆಗೆ 32 ಬಾರಿ ಮಗುವಿಗೆ ರಕ್ತ ಹಾಕಿಸಲಾಗಿದೆ.
ಹೋಟೆಲ್ ನಲ್ಲಿ ಸಪ್ಲಯರ್ ಆಗಿ ದುಡಿಯುತ್ತಿರುವ ಕಾರ್ತಿಕ್ ತಂದೆ ಈರಣ್ಣ, ಕೂಲಿ ಕೆಲಸ ಮಾಡುವ ತಾಯಿ ಸವಿತಾ ದಂಪತಿಗೆ ಮೂವರು ಮಕ್ಕಳು. ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಗಂಡು ಮಗುವಿಗೆ. ಇದೀಗ ಗಂಡು ಮಗು ಕಾರ್ತಿಕ್ ಈ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾನೆ. ಈ ಮಗುವಿನ ಚಿಕಿತ್ಸೆಗೆ ಪ್ರತಿ ತಿಂಗಳು 5-6 ಸಾವಿರ ರೂ. ಖರ್ಚು ಮಾಡಬೇಕು. ಆದರೆ ಬಡತನದಿಂದಾಗಿ ಅಷ್ಟು ಪ್ರತಿ ತಿಂಗಳು ಚಿಕಿತ್ಸೆ ನೀಡಲು ಕಷ್ಟ ಪಡುತ್ತಿರುವ ಕುಟುಂಬವೀಗ ಮತಾಂತರವಾಗಲು ನಿರ್ಧರಿಸಿದೆ.
ಹೋಟೆಲ್ ಗೆ ಬಂದಿರುವ ಗ್ರಾಹಕನೋರ್ವನು ಮತಾಂತರವಾದರೆ ಮಗುವಿನ ಚಿಕಿತ್ಸೆಗೆ ಸಹಾಯ ಆಗುತ್ತದೆ ಎಂದು ಹೇಳಿದ್ದ. ಆದ್ದರಿಂದ ಕ್ರಿಶ್ಚಿಯನ್ ಧರ್ಮದ ಮುಖಂಡರನ್ನು ಈರಣ್ಣ ನಾಗೂರ್ ಈಗಾಗಲೇ ಭೇಟಿ ಮಾಡಿದ್ದಾರೆ. ಅವರೂ ಮಗುವಿನ ಚಿಕಿತ್ಸೆಗಾಗಿ ಸಹಾಯ ಮಾಡಲಾಗುವುದು ಎಂದಿದ್ದಾರೆ. ಚರ್ಚ್ ಗೆ ಬಂದು ಪ್ರಾರ್ಥನೆ ಮಾಡು ಮಗುವಿಗೆ ಕೈಲಾದ ಸಹಾಯ ಮಾಡುತ್ತೇವೆ ಎಂದು ಕ್ರಿಶ್ಚಿಯನ್ ಧರ್ಮದವರು ಹೇಳಿದ್ದಾರೆ. ನನ್ನನ್ನು ಅವರು ಕರೆದಿಲ್ಲ, ನಾನಾಗಿಯೇ ಅವರ ಬಳಿಗೆ ಹೋಗಿ ಚಿಕಿತ್ಸೆಗೆ ಸಹಾಯ ಕೇಳಿದ್ದೇನೆ ಎಂದು ಈರಣ್ಣ ನಾಗೂರ್ ತಮ್ಮ ಸಂಕಷ್ಟವನ್ನು ತೋಡಿಕೊಂಡಿದ್ದಾರೆ.