'ನಾನು ಮೃತಪಟ್ಟ ಬಳಿಕ ಬೇರೊಂದು ವಿವಾಹವಾಗಿ ಆಕೆಗೂ ನನಗೆ ಕಾಟ ಕೊಟ್ಟಂತೆ ಕೊಡಬೇಡ’ ಎಂದು ಪತ್ರ ಬರೆದಿಟ್ಟು ಪತ್ರಕರ್ತೆ ಆತ್ಮಹತ್ಯೆ
Friday, March 25, 2022
ಬೆಂಗಳೂರು: ಪತ್ರಕರ್ತೆಯೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿಗೂ ಮುನ್ನ ತಮ್ಮ ದುಃಖವನ್ನು ಡೆತ್ ನೋಟ್ ನಲ್ಲಿ ಬರೆದುಕೊಂಡಿದ್ದಾರೆ. ಆಕೆ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ 3 ಡೆತ್ನೋಟ್ ಗಳು ಪತ್ತೆಯಾಗಿವೆ. ಇದರಲ್ಲಿ ಒಂದು ಡೆತ್ ನೋಟ್ ನಲ್ಲಿ ಆಕೆಯ ಪತಿಯ ಕರಾಳ ಮುಖ ಅನಾವರಣಗೊಂಡಿದೆ.
ವೈಟ್ಫೀಲ್ಡ್ನ ನಲ್ಲೂರಹಳ್ಳಿ ರಸ್ತೆಯ ಮೈಪೇರ್ ಅಪಾರ್ಟ್ ಮೆಂಟ್ ನಿವಾಸಿ ಶ್ರುತಿ (35) ಮೃತಪಟ್ಟ ಪತ್ರಕರ್ತೆ. ಈಕೆ 5 ದಿನಗಳ ಹಿಂದೆ ಫ್ಲ್ಯಾಟ್ನಲ್ಲಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ಆಕೆಯ ಫ್ಲ್ಯಾಟ್ ಗೆ ಮೃತಳ ಸೋದರ ಆಗಮಿಸಿದ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೂ ಮುನ್ನ ಶ್ರುತಿ ತನ್ನ ಪಾಲಕರಿಗೆ, ತನ್ನ ಪತಿಗೆ ಹಾಗೂ ಸಾವಿಗೆ ಕಾರಣವೇನೆಂದು ವಿವರಿಸಿ ಡೆತ್ ನೋಟ್ ಬರೆದಿದ್ದಾರೆ.
ಶ್ರುತಿಯ ಸಾವಿಗೆ ಆಕೆಯ ಪತಿ ಅನೀಶ್ ಕೊಯಾಡನ್ ನೇ ಕಾರಣವೆಂದು ಮೃತಳ ಸಹೋದರ ನಿಶಾಂತ್ ನಾರಾಯಣ್ ದೂರು ನೀಡಿದ್ದಾರೆ. ತನ್ನ ತಂಗಿಯ ನಡತೆಯ ಬಗ್ಗೆ ಅನುಮಾನಗೊಂಡಿದ್ದ ಅನೀಶ್, ಮನೆಯಲ್ಲಿ ಹಿಡನ್ ಕ್ಯಾಮರಾ ಇಟ್ಟು ನಿಗಾ ವಹಿಸಿದ್ದ. ಆಕೆಯ ಮಾತನ್ನು ರೆಕಾರ್ಡ್ ಮಾಡುತ್ತಿದ್ದ. ವಾರಾಂತ್ಯದಲ್ಲಿ ಪ್ರವಾಸ ಮಾಡುವ ನೆಪದಲ್ಲಿ ಹೊರಗೆ ಕರೆದೊಯ್ದು ಕಿರುಕುಳ ಕೊಡುತ್ತಿದ್ದ. ಮದ್ಯಪಾನ ಮಾಡಿ ಮನೆಗೆ ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದ ಎಂದು ದೂರಿದ್ದಾರೆ.
ಅನೀಶ್ ಮಾರ್ಚ್ 15ರಂದು ಆಕೆಯ ಕೊಲೆಗೆ ಯತ್ನಿಸಿದ್ದ. ಆಕೆಯ ಚೀರಾಟ ಕೇಳಿ ಓಡಿಬಂದ ಭದ್ರತಾ ಸಿಬ್ಬಂದಿ ಪ್ರಾಣ ಉಳಿಸಿದ್ದರು ಎಂದು ನಿಶಾಂತ್ ದೂರಿನಲ್ಲಿ ತಿಳಿಸಿದ್ದರು. ಈ ಬಗ್ಗೆ ವೈಟ್ಫೀಲ್ಡ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ.
ಅತ್ತ ಸಾವಿಗೂ ಮುನ್ನ ಶ್ರುತಿ ಬರೆದಿರುವ ಪತ್ರದಲ್ಲೂ ಪತಿಯ ಕಿರುಕುಳದ ಬಗ್ಗೆ ಎಳೆಎಳೆಯಾಗಿ ಬರೆದುದ್ದಾರೆ. ‘ತನ್ನ ಸಾವಿಗೆ ತಾನೇ ಕಾರಣ. ಇದರಿಂದ ಹೆಚ್ಚು ಕೊರಗಬೇಡಿ. ಆದಷ್ಟು ಬೇಗ ನೋವಿನಿಂದ ಹೊರಬಂದು ನೆಮ್ಮದಿಯಿಂದ ಜೀವನ ಸಾಗಿಸಿ’ ಎಂದು ಪಾಲಕರಿಗೆ ಶ್ರುತಿ ಮನವಿ ಮಾಡಿದ್ದಾರೆ. ಮತ್ತೊಂದು ಪತ್ರದಲ್ಲಿ ‘ಮದುವೆಯಾದ ದಿನದಿಂದ ನನಗೆ ಹಿಂಸೆ ಕೊಟ್ಟಿದ್ದೀಯಾ. ನಾನು ಮೃತಪಟ್ಟ ಬಳಿಕ ನೀನು ಬೇರೊಂದು ವಿವಾಹವಾಗಿ ಆಕೆಗೂ ನನಗೆ ಕಾಟ ಕೊಟ್ಟಂತೆ ಕೊಡಬೇಡ’ ಎಂದು ಪತಿಗೆ ಶ್ರುತಿ ಹೇಳಿದ್ದಾರೆ ಎನ್ನಲಾಗಿದೆ.
ರಾಯಿಟರ್ಸ್ ಸುದ್ದಿಸಂಸ್ಥೆಯ ಪತ್ರಕರ್ತೆಯಾಗಿದ್ದ ಕೇರಳ ಮೂಲದ ಶ್ರುತಿಯನ್ನು ಖಾಸಗಿ ಕಂಪೆನಿಯ ಉದ್ಯೋಗಿ ಅನೀಶ್ 2017ರಲ್ಲಿ ವಿವಾಹವಾಗಿದ್ದ. ಮದುವೆ ಬಳಿಕ ದಂಪತಿ ಬೆಂಗಳೂರಿನ ವೈಟ್ಫೀಲ್ಡ್ ಸಮೀಪದ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದರು. ಕೌಟುಂಬಿಕ ವಿಚಾರದ ಹಿನ್ನೆಲೆಯಲ್ಲಿ ದಂಪತಿಯ ಮಧ್ಯೆ ಮನಸ್ತಾಪ ತಲೆದೋರಿತ್ತು. ಇದೇ ಕಾರಣಕ್ಕೆ ಮಾ.19ರಂದು ಜಗಳವಾಗಿದೆ. ಕೋಪಗೊಂಡ ಅನೀಶ್, ಕೇರಳಕ್ಕೆ ತೆರಳಿದ್ದಾನೆ. ಬಳಿಕ ಶ್ರುತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಪತ್ನಿಯ ಸಾವಿನ ಸುದ್ದಿ ಕೇಳಿ ಅನೀಶ್ ನಾಪತ್ತೆಯಾಗಿದ್ದಾನೆ.