ಅಡುಗೆ ಮಾಡಲು ತೆರಳಿದ ಗೃಹಿಣಿಗೆ ಹಾವು ಕಚ್ಚಿ ಮೃತ್ಯು
Friday, March 25, 2022
ಶಿವಮೊಗ್ಗ: ಅಡುಗೆ ಮಾಡುತ್ತಿದ್ದ ಸಂದರ್ಭ ಹಾವು ಕಚ್ಚಿ ಗೃಹಿಣಿಯೊಬ್ಬರು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆಯೊಂದು ಜಿಲ್ಲೆಯ ಹೊಸನಗರ ತಾಲೂಕಿನ ಮೇಲಿಗೆಬೆಸಿಗೆ ಗ್ರಾಮದಲ್ಲಿ ನಡೆದಿದೆ.
ಸೌಮ್ಯಾ (24) ಹಾವುಕಚ್ಚಿ ಮೃತಪಟ್ಟ ಗೃಹಿಣಿ. ಸೌಮ್ಯಾ ಅಡುಗೆ ಮಾಡುವುದಕ್ಕೆಂದು ಅಡುಗೆ ಮನೆಗೆ ತೆರಳಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ವಿಷಕಾರಿ ಹಾವೊಂದು ಸೌಮ್ಯಾ ಕಾಲಿಗೆ ಕಚ್ಚಿದೆ. ಆದರೆ ಅವರಿಗೆ ಹಾವು ಕಚ್ಚಿರುವುದು ತಿಳಿದಿರಲಿಲ್ಲ. ಸ್ವಲ್ಪ ಸಮಯದ ಬಳಿಕ ಕಾಲಿನಲ್ಲಿ ಊತ ಕಾಣಿಸಿಕೊಂಡು ತೀವ್ರ ನೋವು ಉಂಟಾಗಿದೆ. ಹಾವು ಕಚ್ಚಿರುವ ಬಗ್ಗೆ ಅನುಮಾನಗೊಂಡ ಕುಟುಂಬಸ್ಥರು ಹೊಸನಗರದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.
ಹೊಸನಗರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಸೌಮ್ಯ ಮೃತಪಟ್ಟಿದ್ದಾರೆ. ಸೌಮ್ಯಾಗೆ ನಾಲ್ಕು ವರ್ಷಗಳ ಹಿಂದೆ ನಾಗರಾಜ್ ಎಂಬವರೊಂದಿಗೆ ವಿವಾಹವಾಗಿದ್ದರು. ಈ ದಂಪತಿಗೆ ಮೂರು ವರ್ಷದ ಗಂಡು ಮಗವಿತ್ತು. ಈ ಘಟನೆಯ ಬಗ್ಗೆ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.