ಸ್ನೇಹಿತನ ತಂದೆ ಹಾಗೂ ಸಹಚರರಿಂದ ಅಪ್ರಾಪ್ತೆಯ ಗ್ಯಾಂಗ್ ರೇಪ್, ಕೊಲೆ: 'ಹತ್ಯಾಚಾರಿಗಳು' ಖಾಕಿ ಬಲೆಗೆ
Sunday, March 27, 2022
ಭೋಜ್‌ಪುರ(ಬಿಹಾರ): ಅಪ್ರಾಪ್ತೆಯ ಮೇಲೆ ಆಕೆಯ ಸ್ನೇಹಿತನ ತಂದೆ ಹಾಗೂ ಸಹಚರರು ಗ್ಯಾಂಗ್ ರೇಪ್ ಮಾಡಿ ಕೊಲೆಗೈದು ಹೂತು ಹಾಕಿರುವ ಪೈಶಾಚಿಕ ಕೃತ್ಯವೊಂದು ಬಿಹಾರದ ಭೋಜ್ಪುರ್ನಲ್ಲಿ ನಡೆದಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟಿ ಬಂಧಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆ ಮಾರ್ಚ್ 12 ರಂದು ನಡೆದಿದೆ ಎನ್ನಲಾಗ್ತಿದೆ. ಆಕೆಯ ಪೋಷಕರು ತಮ್ಮ ಪುತ್ರಿ ನಾಪತ್ತೆಯಾಗಿದ್ದಾಳೆಂದು ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು ನಿರ್ಜನ ಪ್ರದೇಶದಲ್ಲಿ ಬಾಲಕಿಯ ಮೃತದೇಹ ಹೂತು ಹಾಕಿರುವುದನ್ನು ಪತ್ತೆ ಮಾಡಿದ್ದಾರೆ. ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಆಕೆಯ ಸ್ನೇಹಿತನ ತಂದೆಯೇ ತನ್ನ ಸಹಚರರೊಂದಿಗೆ ಸೇರಿ ಅತ್ಯಾಚಾರ ಮಾಡಿದ್ದ. ಆ ಬಳಿಕ ಕೃತ್ಯ ಬಯಲಾಗುತ್ತದೆ ಎಂದು ಆಕೆಯನ್ನು ಕೊಲೆ ಮಾಡಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆ. ಪೋಷಕರಿಂದ ಆಕೆಯ ನಾಪತ್ತೆ ಪ್ರಕರಣ ದಾಖಲಾದ ಬಳಿಕ ನಿರ್ಜನ ಪ್ರದೇಶದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಆ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಅಪ್ರಾಪ್ತೆಯ ಕೊಲೆಯ ಬಗ್ಗೆ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಅತ್ಯಾಚಾರವೆಸಗಿ ಕೊಲೆಗೈದ ಆರೋಪಿ ಮುಸಾಹರ್ ಪತ್ನಿಯೇ ಘಟನೆಯ ಬಗ್ಗೆ ಬಾಯ್ಬಿಟ್ಟಿದ್ದಾಳೆ. ತನ್ನ ಪತಿ ಮತ್ತು ಆತನ ಸ್ನೇಹಿತರು ರಾತ್ರಿ ವೇಳೆ ಬಾಲಕಿಯನ್ನು ಕೋಣೆಗೆ ಎಳೆದೊಯ್ದು ಅತ್ಯಾಚಾರ ಮಾಡಿದ್ದಾರೆ. ಬಳಿಕ ಬಾಲಕಿಯನ್ನು ಕೊಂದು ಹೂತು ಹಾಕಿದ್ದಾರೆ ಎಂದು ಹೇಳಿದ್ದಾಳೆ. ಈ ಹಿನ್ನೆಲೆಯಲ್ಲಿ ಮುಸಾಹರ್ ಹಾಗೂ ಆತನ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲು ಮಾಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.