ಇಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಕಾಣಿಸಿಕೊಂಡ ಬೆಂಕಿ: ತಂದೆ - ಮಗಳು ಉಸಿರುಗಟ್ಟಿ ಸಾವು
Saturday, March 26, 2022
ವೆಲ್ಲೂರು, ತಮಿಳುನಾಡು: ಚಾರ್ಜ್ ಗೆ ಹಾಕಿರುವ ಇಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಉಂಟಾಗಿರುವ ವಿಷಕಾರಿ ಹೊಗೆಯಿಂದ ತಂದೆ ಮತ್ತು ಮಗಳು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದಿದೆ.
ವೆಲ್ಲೂರಿನ ಚಿನ್ನಅಲ್ಲಲಾಪುರಂ ನಿವಾಸಿ ದುರೈವರ್ಮ (49) ಹಾಗೈ ಅವರ ಪುತ್ರಿ ಮೋಹನ ಪ್ರೀತಿ (13) ಮೃತಪಟ್ಟ ದುರ್ದೈವಿಗಳು. ಇತ್ತೀಚೆಗಷ್ಟೇ ದುರೈವರ್ಮ ಇ-ಸ್ಕೂಟರ್ ಖರೀದಿಸಿದ್ದರು. ಅವರು ರಾತ್ರಿ ಸ್ಕೂಟರ್ಗೆ ಚಾರ್ಜಿಂಗ್ ಹಾಕಿ ಮಲಗಿದ್ದರು.
ಮಧ್ಯರಾತ್ರಿ ಹೊತ್ತಿಗೆ ಸ್ಕೂಟರ್‌ನಲ್ಲಿ ದಿಢೀರ್ ಎಂದು ಬೆಂಕಿ ಕಾಣಿಸಿಕೊಂಡಿದೆ. ಅದರ ವಿಷಕಾರಿ ಹೊಗೆ ಅವರ ಮನೆಯ ತುಂಬೆಲ್ಲಾ ವ್ಯಾಪಿಸಿದೆ. ಈ ವೇಳೆ ಮನೆಯೊಳಗಿದ್ದ ತಂದೆ ಮತ್ತು ಮಗಳು ಇಬ್ಬರೂ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಬೆಂಕಿಯಿಂದ ಮನೆಗೂ ಹಾನಿಯಾಗಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.