Nurse ವೇಷದಲ್ಲಿ ಬಂದು ನವಜಾತ ಶಿಶುವನ್ನೇ ಕಿಡ್ನಾಪ್ ಮಾಡಿದ್ರು
Thursday, March 24, 2022
ಹಾಸನ: ಮದುವೆಯಾಗಿ ಒಂಭತ್ತು ವರ್ಷಗಳು ಕಳೆದರು ಮಕ್ಕಳಿಲ್ಲದ ಕಾರಣ ಒಂದೇ ಕುಟುಂಬದ 6 ಮಂದಿ ಸೇರಿ ಆಸ್ಪತ್ರೆಯಿಂದ ಮಗುವನ್ನು ಅಪಹರಿಸಿದ್ದು, ಬಳಿಕ ಪೊಲೀಸರ ವಶವಾದ ಘಟನೆ ಅರಕಲಗೂಡು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಮಾ.14 ರಂದು ಅಪಹರಣಕ್ಕೊಳಗಾಗಿದ್ದ ನವಜಾತ ಗಂಡು ಮಗು ಇದೀಗ ಮತ್ತೆ ತಾಯಿ ಮಡಿಲು ಸೇರಿದೆ. ಪ್ರಕರಣ ಸಂಬಂಧ ಆರು ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅರಕಲಗೂಡು ಪಟ್ಟಣದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಅಸ್ಸಾಂ ರಾಜ್ಯದ, ನೂಗಾಮ್ ಜಿಲ್ಲೆ, ಡಿನಂಬರ್ ಗ್ರಾಮದ ಸುರಾಲ್ ಹಾಗೂ ಪತ್ನಿ ಯಾಸ್ಮೀನ್ ಮಾ.13 ರಂದು ಹೆರಿಗೆಗಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಯಾಸ್ಮೀನ್ ದಾಖಲಾಗಿದ್ದರು. ಸಂಜೆ ವೇಳೆ ಇವರಿಗೆ ಗಂಡು ಮಗು ಜನನವಾಗಿತ್ತು. ರಾತ್ರಿ 12 ಗಂಟೆ ಸಮಯದಲ್ಲಿ ನರ್ಸ್ ರೀತಿ ವೇಷ ಹಾಕಿಕೊಂಡು ಬಂದಿದ್ದ ಮಹಿಳೆ ಔಷಧಿ ತನ್ನಿ ಎಂದು ಶಿಶುವಿನ ತಂದೆ ಸುರಾಲ್‌ಗೆ ಚೀಟಿವೊಂದನ್ನು ನೀಡಿ ಕಳುಸಿದ್ದು, ಬಳಿಕ ಮಗುವನ್ನು ಅಪಹರಿಸಿ ಪರಾರಿಯಾಗಿದ್ದರು.
ಮಗು ಅಪಹರಣವಾದ ವಿಚಾರ ತಿಳಿದ ದಂಪತಿ ಕೂಡಲೇ ಅರಕಲಗೂಡು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಆಸ್ಪತ್ರೆಯಿಂದ ಮಗು ಕರೆದ್ದೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಆರೋಪಿಗಳೆಲ್ಲರೂ ಸಿಕ್ಕಿಬಿದ್ದಿದ್ದರು.
ಅಪಹರಣ ಮಾಡಿದ್ದು ಯಾರು? ಯಾಕೆ?
ವಿಚಾರಣೆ ವೇಳೆ ಮಗುವಿನ ಅಪಹರಣ ಹಿಂದೆ ಇರುವ ಕರುಣಾಜನಕ ಕಥೆ ತಿಳಿದಿದೆ. ಮೈಸೂರಿಗೆ ವಿವಾಹ ಮಾಡಿಕೊಡಲಾಗಿದ್ದ ತಾಲೂಕಿನ ಕಣಿಯಾರು ಕೊಪ್ಪಲು ಗ್ರಾಮದ ಸುಶ್ಮಿತಾ ಎಂಬ ಯುವತಿಗೆ ಮದುವೆಯಾಗಿ ಒಂಬತ್ತು ವರ್ಷಗಳಾದರೂ ಮಕ್ಕಳಿರಲಿಲ್ಲ. ಈ ವಿಚಾರದಲ್ಲಿ ಕುಟುಂಬದಲ್ಲಿ ವೈಮನಸ್ಯಕ್ಕೆ ಕಾರಣವಾಗಿ ಮಗನಿಗೆ ಇನ್ನೊಂದು ಮದುವೆ ಮಾಡುವುದಾಗಿ ಪತಿಯ ತಂದೆ ತಾಯಿ ಹಟ ಹಿಡಿದಿದ್ದರು.
ಮಕ್ಕಳಿಲ್ಲದ ಹಾಳಾಗುತ್ತಿರುವ ಮಗಳ ಬದುಕನ್ನು ಉಳಿಸಬೇಕೆಂದು ಎಂದು ಸುಶ್ಮಿತಾ ತಾಯಿ ಶೈಲಜಾ, ಮಗ ಯಶ್ವಂತ್, ಇನ್ನೊಬ್ಬ ಪುತ್ರಿ ಅರ್ಪಿತಾ, ಸುಮಾ, ಪ್ರಕಾಶ್ ಎಂಬುವವರ ಜೊತೆ ಸೇರಿ ಮಗುವಿನ ಅಪಹರಣಕ್ಕೆ ಸಂಚು ರೂಪಿಸಿ, ಈ ಕೃತ್ಯ ಎಸಗಿದ್ದಾರೆ.