ಮಂಗಳೂರು: ಹಲಾಲ್ ಬೇಕಾದವರು ಅರಬ್ ಗೆ ಹೋಗಲಿ: ಕಲ್ಲಡ್ಕ ಪ್ರಭಾಕರ ಭಟ್
Wednesday, March 30, 2022
ಮಂಗಳೂರು: ರಾಜ್ಯದಲ್ಲಿ ಹಲಾಲ್ ವಿವಾದ ಬುಗಿಲೆದ್ದಿದ್ದು, ಇಂದು ಮಂಗಳೂರಿನಲ್ಲಿ ಈ ವಿಚಾರದ ಬಗ್ಗೆ ಆರ್ ಎಸ್ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಅವರು ಕಿಡಿಕಾರಿದ್ದಾರೆ. ಹಲಾಲ್ ಮುಸ್ಲಿಮರಿಗೆ ಬೇಕಾಗಿರಬಹುದು ಆದರೆ ಹಿಂದೂಗಳಿಗೆ ಅದು ಬೇಡ. ಹಿಂದೂಗಳು ಅಂತಹ ಮಾಂಸವನ್ನು ಸ್ವೀಕರಿಸಕೂಡದು ಎಂದು ಹೇಳಿದರು.
ಅರಬ್ ನ ಚಿಂತನೆಯನ್ನು ಭಾರತಕ್ಕೆ ತರುವುದು ಬೇಡ. ಅಲ್ಲಿನ ಚಿಂತನೆ ಬೇಕೆಂದರೆ ಅಂತವರು ಅರಬ್ ಗೆ ಹೋಗಲಿ. ಭಾರತದಲ್ಲಿ ಭಾರತದ ಚಿಂತನೆ ಮಾತ್ರ ಇರಲಿ. ನಮ್ಮ ಸಂಪ್ರದಾಯ ಉಳಿಸಬೇಕು. ಹಾಗಾಗಿ ಹಲಾಲ್ ಗೆ ನಮ್ಮ ಬೆಂಬಲವಿಲ್ಲ. ಹಲಾಲ್ ಬಗ್ಗೆ ತನಗೇನು ಗೊತ್ತಿಲ್ಲ. ಅದರ ಬಗ್ಗೆ ಅಧ್ಯಯನ ಮಾಡಬೇಕಷ್ಟೆ. ಹಿಂದೂಗಳಿಗೆ ತಲೆಯಿಲ್ಲ. ಅದಕ್ಕಾಗಿಯೇ ಅವರು ಹಲಾಲ್ ವಿಚಾರವನ್ನು ತೆಗೆದುಕೊಂಡು ಬರುತ್ತಾರೆ ಎಂದರು.
ಕೊಲ್ಲೂರು ದೇವಳದಲ್ಲಿ ಸಲಾಂ ಆರತಿ ವಿಚಾರವಾಗಿ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ, ಹಿಂದೂಗಳ ಸ್ವಲ್ಪ ಬುದ್ಧಿ ಕಡಿಮೆ ಇರುವ ಜನಗಳು. ಎಲ್ಲರಿಗೂ ಗೌರವ ಕೊಡುವುದಕ್ಕೆ ಹೋಗುತ್ತಾರೆ. ಕೊಲ್ಲೂರಿನಲ್ಲಿ ಸಲಾಂ ಪೂಜೆಯಿಲ್ಲ ಪ್ರದೋಷ ಪೂಜೆ ಇದೆ ಎಂದು ಆಡಳಿತ ಮಂಡಳಿಯವರೇ ಹೇಳಿದ್ದಾರೆ. ಯಾರೊ ಒಬ್ಬ ಮುಸಲ್ಮಾನ ಹೊರಗಡೆ ನಿಂತುಕೊಂಡು ಇದು ಸಲಾಂ ಪೂಜೆ ಅಂದಿದ್ದಾನೆ. ಆಗ ಇದು ಸಲಾಂ ಪೂಜೆ ಎಂದು ಪ್ರಚಾರ ಆಗಿರಬಹುದು. ಇದರ ಹಿಂದೆ ಮುಂದೆ ಏನು ಗೊತ್ತಿಲ್ಲ. ನಾವು ಯಾವುದೇ ಪೂಜೆ ಮಾಡಬೇಕು ಅಂದರೆ ಅದು ಹಿಂದೂ ಪದ್ದತಿ ಪ್ರಕಾರ ಪೂಜೆ ಆಗಬೇಕು. ಸಲಾಂ ಎಂದು ಹೇಳುವುದೇಕೆ. ನಮಸ್ಕಾರ ಎಂದು ಹೇಳಬಹುದಲ್ಲವೇ ಎಂದು ಹೇಳಿದರು.
ರಾಜ್ಯದಲ್ಲಿ ಎದ್ದಿರುವ ಹಿಜಾಬ್ ವಿವಾದದ ಬಗ್ಗೆ ಮಾತನಾಡಿದ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ, ಶಾಲೆಗಳಲ್ಲಿ ಸಮವಸ್ತ್ರದ ಕಾನೂನಿದೆ. ಅದನ್ನು ಸರ್ಕಾರ ಹೇಳಿದೆ. ಆ ಬಳಿಕ ಕೋರ್ಟ್ ಆದೇಶಿಸಿದೆ. ಆದ್ದರಿಂದ ಕೋರ್ಟ್ ಹೇಳಿದನ್ನು ಒಪ್ಪಿಕೊಳ್ಳಬೇಕು. ಕೋರ್ಟ್ ಅನ್ನು ವಿರೋಧ ಮಾಡುವವರು ಬೇರೆ ದೇಶಕ್ಕೆ ಹೋಗಲಿ. ವಿರೋಧ ಮಾಡುವವರಿಗೆ ಸುಪ್ರೀಂ ಕೋರ್ಟ್ ಹೋಗಲು ಅವಕಾಶವಿದೆ. ಆದರೆ ಅದಕ್ಕೆ ಅವರಿಗೆ ಸಮಯವಿಲ್ಲ. ಅದನ್ನು ಅವರು ಒಪ್ಪಿಕೊಳ್ಳುವುದಿಲ್ಲ. ಆದ್ದರಿಂದ ಅವರು ಒಪ್ಪಿಕೊಳ್ಳುವ ದೇಶಕ್ಕೆ ಹೋಗಲಿ. ನಾಳೆ ನಿಮಗೂ ನಿಮ್ಮ ಹೆಂಡತಿಗೂ ಬುರ್ಕಾ ಹಾಕುತ್ತಾರೆ. ನಿಮಗೆ ಸುನ್ನತ್ ಮಾಡ್ತರೆ ಅದಕ್ಕೆ ನಿಮ್ಮ ಒಪ್ಪಿಗೆಯಿದೆಯೇ. ಈ ಮಣ್ಣಿನ ಕಾನೂನನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಆಗೋದಿಲ್ಲ ಅಂದ್ರೆ ಆಗುವ ದೇಶಕ್ಕೆ ಅವರು ಹೋಗಲಿ ಎಂದರು.