ಕೇಂದ್ರ ಸರಕಾರಿ ನೌಕರರಿಗೆ ಶೇ.3 ತುಟ್ಟಿಭತ್ಯೆ ಹೆಚ್ಚಳ
Wednesday, March 30, 2022
ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಶೇ 3 ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡಲಾಗಿದೆ.
ಇಂದು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಶೇ.3 ಡಿಎಯನ್ನು ಹೆಚ್ಚಳ ಮಾಡುವುದಕ್ಕೆ ಅನುಮೋದನೆ ನೀಡಲಾಯಿತು.
2022ರ ಜ.1ರಿಂದಲೇ ಡಿಎ ಮತ್ತು ಡಿಆರ್‌ನ ಹೊಸ ದರಗಳು ಜಾರಿಗೆ ಬರಲಿದೆ. ಪ್ರಸ್ತುತ ಮೂಲ ವೇತನದ ಶೇ.31ರಷ್ಟು ಮೊತ್ತವನ್ನು ತುಟ್ಟಿ ಭತ್ಯೆ ಅಥವಾ ಪರಿಹಾರವಾಗಿ ನೀಡಲಾಗುತ್ತಿದ್ದು, ಇಂದು ಸಿಕ್ಕ ಅನುಮೋದನೆಯ ಬಳಿಕ ಡಿಎ ಯು ಶೇ.34ಕ್ಕೆ ಏರಿಕೆಯಾದಂತಾಗಿದೆ.
ಈ ಹೆಚ್ಚಳವು 7ನೇ ಕೇಂದ್ರೀಯ ವೇತನ ಆಯೋಗದ ಶಿಫಾರಸುಗಳನ್ನು ಆಧರಿಸಿದ ಸ್ವೀಕೃತ ಸೂತ್ರಕ್ಕೆ ಅನುಗುಣವಾಗಿದ್ದು ತುಟ್ಟಿ ಭತ್ಯೆ ಹೆಚ್ಚಿಸುವ ನಿರ್ಧಾರದಿಂದಾಗಿ ಸರ್ಕಾರಕ್ಕೆ ವಾರ್ಷಿಕ 9,544.50 ಕೋಟಿ ರೂ. ಹೊರೆಯಾಗಲಿದೆ.
ಡಿಎ ಹೆಚ್ಚಳವು 2022ರ ಜನವರಿ 1ರಿಂದಲೇ ಕೇಂದ್ರ ಸರಕಾರದ 47.68 ಲಕ್ಷ ನೌಕರರು ಮತ್ತು 68.62 ಲಕ್ಷ ಪಿಂಚಣಿದಾರರಿಗೆ ಅನ್ವಯವಾಗಲಿದೆ.