
ಹಿಜಾಬ್ ಪ್ರಕರಣ- ಸರಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್ ತೀರ್ಪು ( Video)
Tuesday, March 15, 2022
ಬೆಂಗಳೂರು: ಶೈಕ್ಷಣಿಕ ಸಂಸ್ಥೆ ಗಳಲ್ಲಿ ಹಿಜಾಬ್ ಧರಿಸುವ ಪ್ರಕರಣ ಸಂಬಂಧ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಸರ್ಕಾರದ ಆದೇಶವನ್ನು ಎತ್ತಿಹಿಡಿದು ಹೈಕೋರ್ಟ್ ತೀರ್ಪು ನೀಡಿದೆ.
ತರಗತಿಗೆ ಬರುವ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಬಾರದಂತೆ ನಿರ್ಬಂಧಿಸಿರುವ ಕ್ರಮವನ್ನು ಪ್ರಶ್ನಿಸಿ ಉಡುಪಿಯ ಸರಕಾರ ಮಹಿಳಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ಸೇರಿದಂತೆ ಕೆಲವು ವಿದ್ಯಾರ್ಥಿನಿಯರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಈ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ವಾದವಿವಾದ ಆಲಿಸಿದ ತ್ರೀಸದಸ್ಯ ಪೀಠ ಅರ್ಜಿಯನ್ನು ವಜಾ ಮಾಡಿ ಆದೇಶ ಮಾಡಿದೆ.
ಹನ್ನೊಂದು ದಿನಗಳ ವಿಚಾರಣೆಯ ಬಳಿಕ ಫೆ. 25ರಂದು ಹೈಕೋರ್ಟ್ ತ್ರಿಸದಸ್ಯ ಪೀಠ ತೀರ್ಪನ್ನು ಕಾಯ್ದಿರಿಸಿತ್ತು. ಮುಖ್ಯ ನ್ಯಾ. ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್, ನ್ಯಾ.ಜೆಎಂ ಖಾಜಿ ಅವರಿದ್ದ ಪೂರ್ಣ ಪೀಠ ಈ ತೀರ್ಪು ಪ್ರಕಟಿಸಿದೆ.
ತೀರ್ಪಿನ ಪ್ರಮುಖಾಂಶಗಳು:
ತರಗತಿಗೆ ಪ್ರವೇಶಕ್ಕೆ ಹಿಜಾಬ್ ನಿರ್ಬಂಧ ಪ್ರಶ್ನಿಸಿದ್ದ ಅರ್ಜಿಗಳನ್ನು ತಿರಸ್ಕರಿಸಿದ ಹೈಕೋರ್ಟ್ ತ್ರಿಸದಸ್ಯ ಪೀಠವು ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದು ಸಂವಿಧಾನದ ಅಡಿ ಮೂಲಭೂತ ಹಕ್ಕು ಅಲ್ಲ ಎಂದು ಅಭಿಪ್ರಾಯಪಟ್ಟಿದೆ.
ಶೈಕ್ಷಣಿಕ ಸಂಸ್ಥೆಗಳಲ್ಲಿ ಯೂನಿಫಾರ್ಮ್ ಸಂಹಿತೆ ಜಾರಿಗೆ ತರುವಂತೆ ಸರ್ಕಾರ ಹೊರಡಿಸಿದ ಆದೇಶವು ನಿಯಮಬಾಹಿರ ಅಲ್ಲ ಎಂದ ಹೈಕೋರ್ಟ್ ಸಂವಿಧಾನದ ವಿಧಿ 25 (ಧಾರ್ಮಿಕ ಸ್ವಾತಂತ್ರ್ಯ ವಿಧಿ 19 (1) ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ವಿಧಿ 21 (ಜೀವಿಸುವ ಹಕ್ಕು) ಉಲ್ಲಂಘನೆ ಆಗಿಲ್ಲ ಎಂದು ಅಭಿಪ್ರಾಯಪಟ್ಟಿದೆ