ಕಳೆದು ಹೋಗಿರುವ ತಮ್ಮ ಬ್ಯಾಗ್ ಪತ್ತೆಗೆ ಇಂಡಿಗೊ ವಿಮಾನಯಾನ ಸಂಸ್ಥೆಯ ವೆಬ್‍ಸೈಟ್ ಅನ್ನೇ ಹ್ಯಾಕ್ ಮಾಡಿದ ಪ್ರಯಾಣಿಕ
Thursday, March 31, 2022
ಹೊಸದಿಲ್ಲಿ: ಕಳೆದು ಹೋಗಿರುವ ತಮ್ಮ ಬ್ಯಾಗ್ ಪತ್ತೆ ಮಾಡಲೆಂದು ಇಂಡಿಗೊ ವಿಮಾನಯಾನ ಸಂಸ್ಥೆಯ ವೆಬ್‍ಸೈಟ್ ಅನ್ನೇ ಹ್ಯಾಕ್ ಮಾಡಿರುವುದಾಗಿ ಪ್ರಯಾಣಿಕರೊಬ್ಬರು ಹೇಳಿಕೊಂಡಿದ್ದಾರೆ. ವಿಮಾನಯಾನ ಸಂಸ್ಥೆಯ ವೆಬ್‍ಸೈಟ್‍ನ ದೌರ್ಬಲ್ಯವನ್ನು ಬಳಸಿಕೊಂಡು, "ತನ್ನ ಬ್ಯಾಗನ್ನು ಆತನ ಬ್ಯಾಗ್ ಎಂದು ತಪ್ಪಾಗಿ ತಿಳಿದು ಕೊಂಡೊಯ್ದಿರುವ ಸಹ ಪ್ರಯಾಣಿಕನ ದೂರವಾಣಿ ಸಂಖ್ಯೆಯನ್ನು ಈ ಮೂಲಕ ಪತ್ತೆ ಮಾಡಿದ್ದೇನೆ" ಎಂದು ನಂದನ್ ಕುಮಾರ್ ಎಂಬ ಪ್ರಯಾಣಿಕ ವಿವರಿಸಿದ್ದಾರೆ. ಅಲ್ಲದೆ ಈ ಮೂಲಕ ಇಂಡಿಗೊ ವಿಮಾನಯಾನ ಸಂಸ್ಥೆಯ ವೆಬ್‍ಸೈಟ್ ಹೇಗೆ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡುತ್ತಿದೆ ಎನ್ನುವುದನ್ನು ಪತ್ತೆ ಮಾಡಿದ್ದು, ವಿಮಾನಯಾನ ಕಂಪನಿ ಇದನ್ನು ಸರಿಪಡಿಸಿಕೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
"ಪಾಟ್ನಾದಿಂದ ಬೆಂಗಳೂರಿಗೆ ಮಾರ್ಚ್ 27ರಂದು ಇಂಡಿಗೊ 6ಇ-185 ವಿಮಾನದಲ್ಲಿ ಪ್ರಯಾಣಿಸುತ್ತಿದ್ದೆ. ಈ ಸಂದರ್ಭ ಸಹ ಪ್ರಯಾಣಿಕರೋರ್ವರು ತನ್ನ ಬ್ಯಾಗ್ ಎಂದು ನನ್ನ ಎಂದು ಕೊಂಡೊಯ್ದಿದ್ದರು. ಈ ಬಗ್ಗೆ ತಿಳಿದ ತಕ್ಷಣ ನಂದನ್ ಕುಮಾರ್ ಇಂಡಿಗೊ ಕಸ್ಟಮರ್ ಕೇರ್ ವಿಭಾಗಕ್ಕೆ ಕರೆ ಮಾಡಿದ್ದಾರೆ. ಸಂಸ್ಥೆಯ ಐವಿಆರ್ ವ್ಯವಸ್ಥೆ ಮೂಲಕ ಹಲವು ಬಾರಿ ಕರೆ ಮಾಡಿದರೂ, ಸಿಬ್ಬಂದಿ ಸಹ ಪ್ರಯಾಣಿಕನನ್ನು ಸಂಪರ್ಕಿಸುವ ಪ್ರಯತ್ನದಲ್ಲಿ ವಿಫಲರಾಗಿದ್ದಾರೆ. ಅಲ್ಲದೆ ಖಾಸಗಿತನ ಹಾಗೂ ಮಾಹಿತಿ ಸಂರಕ್ಷಣೆಯ ಕಾರಣ ನೀಡಿ ಆತನ ದೂರವಾಣಿ ಸಂಖ್ಯೆಯನ್ನು ನೀಡಲೂ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ನಿರಾಕರಿಸಿದ್ದರು.
ಸಮಸ್ಯೆ ಬಗೆಹರಿಯದೇ ಇದ್ದಾಗ ಏರ್‌ಲೈನ್ಸ್ ವೆಬ್‍ಸೈಟ್‍ನಲ್ಲಿ ಸಹ ಪ್ರಯಾಣಿಕನ ಪಿಎನ್‍ಆರ್ ಅಥವಾ ಬ್ಯಾಗ್‍ನಲ್ಲಿ ಬರೆದಿದ್ದ ಪ್ರಯಾಣಿಕರ ಹೆಸರಿನ ದಾಖಲೆಯ ಮಾಹಿತಿ ಹೊರತೆಗೆಯುವ ಪ್ರಯತ್ನ ಮಾಡಿ ಚೆಕ್ ಇನ್, ಎಡಿಟ್ ಬುಕ್ಕಿಂಗ್, ಅಪ್‍ಡೇಟ್ ಕಾಂಟ್ಯಾಕ್ಟ್ ಹೀಗೆ ಹಲವು ವಿಧಾನದಲ್ಲಿ ಪ್ರಯತ್ನಿಸಿದರೂ ದೂರವಾಣಿ ಸಂಖ್ಯೆ ದೊರಕಿರಲಿಲ್ಲ. "ಪ್ರಯತ್ನಗಳು ವಿಫಲವಾದಾಗ, ಸಹಜ ಸ್ವಭಾವ ಕೆಲಸ ಮಾಡಿತು. ನಾನು ಕಂಪ್ಯೂಟರ್‍ನ ಎಫ್12 ಬಟನ್ ಒತ್ತಿ, @ಇಂಡಿಗೊ6ಇ ವೆಬ್‍ಸೈಟ್‍ನ ಡೆವಲಪರ್ ಕನ್ಸೋಲ್ ತೆರೆದೆ. ನಂತರ ಇಡೀ ಚೆಕ್ ಇನ್ ಪ್ರಕ್ರಿಯೆಯನ್ನು ನೆಟ್‍ವರ್ಕ್ ಲಾಗ್ ರೆಕಾರ್ಡ್‍ನಲ್ಲಿ ತೆಗೆಯಲು ಸಾಧ್ಯವಾಯಿತು" ಎಂದು ಟ್ವೀಟ್ ಮಾಡಿದ್ದಾರೆ. ಅಂತಿಮವಾಗಿ ಸಹ ಪ್ರಯಾಣಿಕನ ದೂರವಾಣಿ ಸಂಖ್ಯೆ ಮತ್ತು ಇ-ಮೇಲ್ ಐಡಿ ಪತ್ತೆ ಮಾಡಿ, ಅವರಿಗೆ ದೂರವಾಣಿ ಕರೆ ಮಾಡಿ ಬ್ಯಾಗ್ ವಿನಿಮಯ ಮಾಡಿಕೊಳ್ಳಲು ಬಯಸಿದ್ದೆ ಎಂದು ನಂದನ್ ಕುಮಾರ್ ಹೇಳಿದ್ದರು.
ಇಂಡಿಗೊ ತನ್ನ ಕಸ್ಟಮರ್ ಕೇರ್ ಸೇವೆ ಮತ್ತು ಐವಿಆರ್ ಸೇವೆ ಸುಧಾರಿಸಬೇಕು. ಆದರೆ ಈ ಸಂಬಂಧ ಹೇಳಿಕೆ ನೀಡಿರುವ ಇಂಡಿಗೊ ಸಂಸ್ಥೆ, "ತನ್ನ ಐಟಿ ವ್ಯವಸ್ಥೆ ಸಂಪೂರ್ಣ ಭದ್ರವಾಗಿದೆ. ತಮ್ಮ ವೆಬ್‍ಸೈಟ್ ಬೇಧಿಸಲು ಸಾಧ್ಯವೇ ಇಲ್ಲ" ಎಂದು ಹೇಳಿಕೊಂಡಿದೆ. ಯಾವುದೇ ಪ್ರಯಾಣಿಕ ತನ್ನ ಬುಕ್ಕಿಂಗ್ ವಿವರಗಳನ್ನು ಪಿಎನ್‍ಆರ್, ಕೊನೆಯ ಹೆಸರು, ಸಂಪರ್ಕ ಸಂಖ್ಯೆ ಅಥವಾ ಇ-ಮೇಲ್ ವಿಳಾಸವನ್ನು ವೆಬ್‍ಸೈಟ್‍ನಿಂದ ಪಡೆದುಕೊಳ್ಳಬಹುದು. ಈ ವ್ಯವಸ್ಥೆ ವಿಶ್ವಾದ್ಯಂತ ಇದೆ ಎಂದು ಪ್ರತಿಪಾದಿಸಿದೆ.