
ಮಂಗಳೂರು: ಮುಕ್ಕ ಪ್ರದೇಶದಲ್ಲಿ ಹುಚ್ಚುನಾಯಿಗಳ ಬಾಧೆ; ಮನೆಯೊಳಗಡೆ ನುಗ್ಗಿ ತಂದೆ-ಪುತ್ರಿಗೆ ಕಚ್ಚಿ ಗಂಭೀರ ಗಾಯ
ಮಂಗಳೂರು: ನಗರದ ಮುಕ್ಕ ಪ್ರದೇಶದಲ್ಲಿ ಹುಚ್ಚು ನಾಯಿಗಳ ಕಾಟ ಅಧಿಕವಾಗಿದ್ದು, ಪರಿಣಾಮ ಅಲ್ಲಿನ ಜನತೆ ಆತಂಕಕ್ಕೆ ಒಳಗಾಗಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮುಕ್ಕ, ಮಲ್ಲಮಾರ್, ದೊಂಬೇಲ್, ದೊಂಬೇಲ್ ಬೀಚ್, ಶರತ್ ಬಾರ್ ರಸ್ತೆ ಸೇರಿದಂತೆ ಸುತ್ತಮುತ್ತ ಹುಚ್ಚುನಾಯಿಗಳ ಕಾಟ ಅತಿರೇಕಕ್ಕೆ ಹೋಗಿದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಕೆಲದಿನಗಳ ಹಿಂದೆ, ಮಲ್ಲಮಾರ್ ಎಂಬಲ್ಲಿನ ನಿವಾಸಿ ಸಂತೋಷ್ ಎಂಬವರ ಮನೆಯೊಳಗೆ ಪ್ರವೇಶಿಸಿದ ಹುಚ್ಚು ನಾಯಿಯೊಂದು ಸಂತೋಷ್ ಹಾಗೂ ಅವರ ಪುತ್ರಿಯ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಅಯಗೊಳಿಸಿತ್ತು. ಬಳಿಕ ಸ್ಥಳೀಯರು ಅವರಿಬ್ಬರನ್ನೂ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರು. ಹುಚ್ಚು ನಾಯಿಕಡಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಸಂತೋಷ್ ಅವರ ಪುತ್ರಿ ಕೈಯ ನರವೇ ತುಂಡಾಗಿತ್ತು ಹಾಗೂ ಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿತ್ತು. ವೆನ್ಲಾಕ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಅವರು ಮನೆಗೆ ಮರಳಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆಯ ಬಳಿಕ ಸ್ಥಳೀಯರು ಮನೆಬಾಗಿಲು ತೆರೆಯಲು ಭಯ ಪಡುವಂತಾಗಿದೆ. ಅಲ್ಲದೆ, ಮನೆಯಿಂದ ಹೊರಗಡೆ ಹೋಗಲು ಗುಂಪು ಗುಂಪಾಗಿ ತೆರಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಇದೀಗ ಹುಚ್ಚು ನಾಯಿಗಳನ್ನು ಕೊಲ್ಲಲಾಗಿದ್ದು, ಹುಚ್ಚು ನಾಯಿಯ ಕಡಿತಕ್ಕೊಳಗಾದ ಸಂತೋಷ್ ಮತ್ತು ಹಾಗೂ ಅವರ ಪುತ್ರಿಯ ವೈದ್ಯಕೀಯ ಖರ್ಚುಗಳನ್ನು ಮಹಾ ನಗರ ಪಾಲಿಕೆ ಭರಿಸಲಿದೆ. ಸಂತ್ರಸ್ತರನ್ನು ಖುದ್ದು ಭೇಟಿಯಾಗಿ ಮಾತನಾಡುತ್ತೇನೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಪೊರೇಟರ್ ಕುಮಾರಿ ಶ್ವೇತಾ ಪೂಜಾರಿ ಭರವಸೆ ನೀಡಿದ್ದಾರೆ.