
ಪತಿಯಾದರೇನು? ಮದುವೆ ಎಂದರೆ ಹೆಂಡತಿಯನ್ನು ಬೇಕಾಬಿಟ್ಟಿ ಅನುಭವಿಸುವ ಲೈಸೆನ್ಸ್ ಅಲ್ಲ - High Court
ಬೆಂಗಳೂರು: ಅತ್ಯಾಚಾರ ಪ್ರಕರಣಗಳಲ್ಲಿ ಪತಿಯಾದರೂ ಸರಿ ಅವರಿಗೆ ವಿನಾಯಿತಿ ನೀಡಬಾರದು ಅಲ್ಲದೇ ಶಾಸಕಾಂಗ ಈ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
ಪತಿಯೇ ತನಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪತ್ನಿಯೇ ದೂರು ನೀಡಿದ ಪ್ರಕರಣವೊಂದರ ಸಂಬಂಧ ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅತ್ಯಾಚಾರ ದೂರು ದಾಖಲಾಗಿದ್ದು ಸ್ವತಃ ಗಂಡನ ಮೇಲೆ, ಹಾಗಾಗಿ ಪತಿಗೆ ವಿನಾಯಿತಿ ಇದೆ ಎಂದು ಗಂಡನ ಪರ ವಕೀಲರು ಈ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ: ಓಡಿಶಾ ಮೂಲದ ದಂಪತಿ ಬೆಂಗಳೂರಿನ ಸರ್ಜಾಪುರದಲ್ಲಿ ವಾಸವಾಗಿತ್ತು. 43 ವರ್ಷದ ಗಂಡ 27 ವರ್ಷದ ತನ್ನ ಪತ್ನಿಯ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದ. ಅಲ್ಲದೇ ಪ್ರಕೃತಿ ವಿರುದ್ಧ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ. ತನ್ನನ್ನು ಗಂಡ ಲೈಂಗಿಕ ಗುಲಾಮಳಂತೆ ಬಳಸಿಕೊಂಡಿದ್ದಾಗಿ ಗಂಡನ ವಿರುದ್ಧವೇ ಆಕೆ ಆರೋಪ ಮಾಡಿದ್ದರು. ಸಲ್ಲದೇ ತನ್ನ ಅಪ್ರಾಪ್ತ ಮಗಳ ಮೇಲೂ ಪತಿರಾಯ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಬೆಂಗಳೂರು ಪೂರ್ವ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಚಾರಣಾ ನ್ಯಾಯಾಲಯ ಅತ್ಯಾಚಾರ ಆರೋಪ ಕೈಬಿಡಲು ನಿರಾಕರಿಸಿತ್ತು. ಅತ್ಯಾಚಾರ ಆರೋಪ ರದ್ದು ಕೋರಿ ಪತಿಯಿಂದ ಹೈಕೋರ್ಟ್ ಗೆ ಅರ್ಜಿಯೂ ಸಲ್ಲಿಕೆಯಾಗಿದೆ. ಪತಿಗೆ ಅತ್ಯಾಚಾರ ಪ್ರಕರಣದಲ್ಲಿ ವಿನಾಯಿತಿ ಇದೆ ಎಂಬ ವಾದವನ್ನೂ ಮಂಡಿಸಲಾಗಿತ್ತು. ಆದರೂ ಪತಿಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್ ಏಕಸದಸ್ಯ ಪೀಠವು ಪತಿಯ ವಿರುದ್ಧವೂ ಅತ್ಯಾಚಾರ ದೂರು ಪರಿಗಣಿಸಬೇಕು. ಪತಿಯ ಕೃತ್ಯದಿಂದ ಪತ್ನಿಯ ಮೇಲೆ ಮಾನಸಿಕವಾಗಿ, ದೈಹಿಕವಾಗಿ ಪರಿಣಾಮ ಬೀರುತ್ತದೆ. ಪತ್ನಿಯ ಮನಸಿನ ಮೇಲೆ ಅಳಿಸಲಾಗದ ಕಲೆ ಉಳಿದುಬಿಡುತ್ತದೆ. ಇಂತಹ ಮನೋವೈಪರೀತದ ಸಂದರ್ಭದಲ್ಲಿ ಅತ್ಯಾಚಾರ ಪ್ರಕರಣಗಳಲ್ಲಿ ಪತಿಗಿರುವ ವಿನಾಯಿತಿಯನ್ನು ರದ್ದು ಮಾಡುವುದೇ ಒಳಿತು. ಶಾಸಕಾಂಗ ಈ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅತ್ಯಾಚಾರ ವಿಚಾರದಲ್ಲಿ ಮಹಿಳೆ, ಪತ್ನಿಯ ನಡುವೆ ತಾರತಮ್ಯ ಸರಿಯಲ್ಲ. ವಿವಾಹ ಪತ್ನಿಯ ಮೇಲೆ ದೌರ್ಜನ್ಯವೆಸಗಲು ನೀಡುವ ಅನುಮತಿಯಲ್ಲ ಎಂದೂ ನ್ಯಾ. ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.