
ಪರೀಕ್ಷಾ ಕೊಠಡಿಯಲ್ಲಿ ನಕಲು ಮಾಡುತ್ತಿದ್ದ ವಿದ್ಯಾರ್ಥಿ ಕೈಕಚ್ಚಿದ ಉಪನ್ಯಾಸಕ!
Thursday, March 31, 2022
ಶಿವಮೊಗ್ಗ: ಪರೀಕ್ಷೆ ಬರೆಯುತ್ತಿದ್ದ ಸಂದರ್ಭ ಉಪನ್ಯಾಸಕರೊಬ್ಬರು ನಕಲು ಮಾಡುತ್ತಿದ್ದ ವಿದ್ಯಾರ್ಥಿಯ ಕೈ ಕಚ್ಚಿರುವ ವಿಚಿತ್ರ ಘಟನೆ ಹೊಸನಗರ ಸರ್ಕಾರಿ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಭವಿಸಿದೆ.
ಸರ್ಕಾರಿ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎ ಪರೀಕ್ಷೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬ ನಕಲು ಮಾಡುತ್ತಿರುವುದನ್ನು ಪರೀಕ್ಷಾ ಕೊಠಡಿ ಮೇಲ್ವಿಚಾರಕರಾಗಿದ್ದ ಉಪನ್ಯಾಸಕರು ನೋಡಿದ್ದಾರೆ. ಈ ಬಗ್ಗೆ ಅವರು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ನಕಲು ಮಾಡಲು ಬಳಕೆ ಮಾಡುತ್ತಿದ್ದ ಮೊಬೈಲ್ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ.
ಈ ಸಂದರ್ಭ ಮಾತಿಗೆ ಮಾತು ಬೆಳೆದು ಗಲಾಟೆ ಸಂಭವಿಸಿದೆ. ಪರಿಣಾಮ ಸಿಟ್ಟಿಗೆದ್ದ ಉಪನ್ಯಾಸಕರು ವಿದ್ಯಾರ್ಥಿಯ ಕೈ ಕಚ್ಚಿದ್ದಾರೆ. ಈ ಬಗ್ಗೆ ಉಪನ್ಯಾಸಕರ ವಿರುದ್ಧ ವಿದ್ಯಾರ್ಥಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಉಪನ್ಯಾಸಕರೂ ಕೂಡ ಪರೀಕ್ಷಾ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆಂದು ವಿದ್ಯಾರ್ಥಿ ವಿರುದ್ಧ ದೂರು ದಾಖಲಿಸಿದ್ದಾರೆ. ಆದರೆ ಪ್ರಕರಣ ಎಲ್ಲಿಗೋ ಹೋಗುತ್ತಿದೆ ಹಾಗೂ ವಿದ್ಯಾರ್ಥಿಯ ಭವಿಷ್ಯ ಹಾಳಾಗಬಾರದಿರಲಿ ಎನ್ನುವ ಕಾರಣಕ್ಕೆ ಸಂಧಾನ ಮಾಡಿ ಪ್ರಕರಣವನ್ನು ಇತ್ಯರ್ಥಗೊಳಿಸಲಾಗಿದೆ.