16ರ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಶಿಶುವಿಗೆ ಜನ್ಮ ನೀಡಲು ಕಾರಣನಾದ 59ರ ಆರೋಪಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ!
Thursday, March 31, 2022
ಮಂಗಳೂರು: 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಆಕೆ ಶಿಶುವಿಗೆ ಜನ್ಮ ನೀಡಲು ಕಾರಣನಾದ 59 ವರ್ಷದ ಆರೋಪಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 30 ಸಾವಿರ ರೂ. ದಂಡ ವಿಧಿಸಿ ಮಂಗಳೂರಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಹಾಗೂ 2ನೇ ತ್ವರಿತಗತಿ ವಿಶೇಷ ನ್ಯಾಯಾಲಯ ತೀರ್ಪು ನೀಡಿ ಆದೇಶಿಸಿದೆ.
ಸುರತ್ಕಲ್ ಬಳಿಯ ಸಸಿಹಿತ್ಲು ನಿವಾಸಿ ವಾಮನ ಪೂಜಾರಿ (59) ಪ್ರಕರಣದಲ್ಲಿ ಶಿಕ್ಷೆಗೊಳಗಾದ ಆರೋಪಿ.
2016ರ ಸಪ್ಟೆಂಬರ್ ನಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಾಗ ಆರೋಪಿ ವಾಮನ ಪೂಜಾರಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ಅತ್ಯಾಚಾರ ಎಸಗಿದ್ದ. ಬಳಿಕ ಯಾರಿಗೂ ವಿಚಾರ ತಿಳಿಸಿದಂತೆ ಬೆದರಿಕೆ ಒಡ್ಡಿದ್ದ. ಆ ಬಳಿಕ ಆರೋಪಿ ನಿರಂತರವಾಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದು, 2017 ಮಾ. 29 ರಂದು ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಸಂದರ್ಭ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಡಿಎನ್‌ಎ ಪರೀಕ್ಷೆ ನಡೆಸಿದಾಗ ಆರೋಪಿ ವಾಮನ ಪೂಜಾರಿ ಆ ಹೆಣ್ಣು ಮಗುವಿನ ಜೈವಿಕ ತಂದೆ ಎನ್ನುವುದು ಸಾಬೀತಾಗಿತ್ತು. ಸುರತ್ಕಲ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಎಚ್.ಎಂ.ಪೂವಪ್ಪ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ. ಇನ್ಸ್‌ಪೆಕ್ಟರ್ ಚೆಲುವರಾಜು ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಮಂಗಳೂರಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಹಾಗೂ 2ನೇ ತ್ವರಿತಗತಿ ವಿಶೇಷ ನ್ಯಾಯಾಲಯದ ವಿಚಾರಣೆ ನಡೆಸಿ ವಾಮನ ಪೂಜಾರಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ ಅವರು ಆರೋಪಿಗೆ ಪೊಕ್ಸೊ ಕಾಲಂ 6 ರನ್ವಯ 10 ವರ್ಷ ಕಠಿಣ ಶಿಕ್ಷೆ ಮತ್ತು 30 ಸಾವಿರ ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಹೆಚ್ಚುವರಿಯಾಗಿ 2 ತಿಂಗಳ ಸದಾ ಸಜೆಯನ್ನು ಅನುಭವಿಸಬೇಕು. ಐಪಿಸಿ ಸೆಕ್ಷನ್ 506 (ಕೊಲೆ ಬೆದರಿಕೆ ಆರೋಪ) ಅನ್ವಯ 1 ವರ್ಷ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.
ಅಲ್ಲದೆ ಸಂತ್ರಸ್ತ ಬಾಲಕಿಗೆ 4 ಲಕ್ಷ ರೂ. ಗಳನ್ನು ಸರಕಾರದಿಂದ ಪರಿಹಾರವಾಗಿ ಕೊಡಿಸಬೇಕೆಂದು ನ್ಯಾಯಾಧೀಶರು ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ ಸರಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ. ವೆಂಕಟರಮಣ ಸ್ವಾಮಿ ವಾದಿಸಿದ್ದರು.