Featured

ಮದುವೆಯಾದ ಎರಡೇ ತಿಂಗಳಿಗೆ ಪ್ರೇಮ ವಿವಾಹ ದುರಂತ ಅಂತ್ಯ: ಪತ್ನಿಯನ್ನು ರಾಡ್‌ನಿಂದ ಹೊಡೆದು ಕೊಂದ ಪತಿ; ಸ್ವತಃ ಪೊಲೀಸರಿಗೆ ಕರೆ ಮಾಡಿ ಶರಣು! Married for just 2 months, man kills wife in UP, calls police himself




ಕಾನ್ಪುರ (ಉತ್ತರ ಪ್ರದೇಶ): ಪ್ರೀತಿಸಿ ಮದುವೆಯಾಗಿದ್ದ ಯುವತಿಯೊಬ್ಬಳನ್ನು ಕೇವಲ ಎರಡು ತಿಂಗಳಲ್ಲೇ ಆಕೆಯ ಪತಿ ಕಬ್ಬಿಣದ ರಾಡ್‌ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಕಾನ್ಪುರ ದೇಹಾತ್ ಜಿಲ್ಲೆಯಲ್ಲಿ ನಡೆದಿದೆ. ಹತ್ಯೆಯ ನಂತರ ಆರೋಪಿ ಪತಿಯೇ ಸ್ವತಃ ಪೊಲೀಸರಿಗೆ ಕರೆ ಮಾಡಿ ಕೃತ್ಯ ಒಪ್ಪಿಕೊಂಡು ಶರಣಾಗಿದ್ದಾನೆ.

ಸಪ್ನಾ ಅಲಿಯಾಸ್ ಆಸ್ಮಾ (29) ಕೊಲೆಯಾದ ಮಹಿಳೆ. ಆಕೆಯ ಪತಿ, ಗಾರೆ ಕೆಲಸಗಾರ ಗಜೇಂದ್ರ ಸಂಖ್ವಾರ್ (30) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೊಬೈಲ್ ಕರೆ ವಿಚಾರವಾಗಿ ಜಗಳ, ರಾಡ್‌ನಿಂದ ತಲೆಗೆ ಹೊಡೆದು ಹತ್ಯೆ:

ಎರಡು ತಿಂಗಳ ಹಿಂದೆಯಷ್ಟೇ ನ್ಯಾಯಾಲಯದಲ್ಲಿ ರಿಜಿಸ್ಟರ್ ವಿವಾಹವಾಗಿದ್ದ ಈ ದಂಪತಿ, ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಭಾನುವಾರ ಬೆಳಗ್ಗೆ ಸುಮಾರು 10:30ರ ಸುಮಾರಿಗೆ ಸಪ್ನಾ ತನ್ನ ಮೊಬೈಲ್ ಫೋನ್‌ನಲ್ಲಿ ಯಾರೊಂದಿಗೋ ಮಾತನಾಡುತ್ತಿದ್ದಳು. ಈ ವೇಳೆ ಪತಿ-ಪತ್ನಿ ನಡುವೆ ಯಾವುದೋ ವಿಚಾರವಾಗಿ ಮಾತಿಗೆ ಮಾತು ಬೆಳೆದು ತೀವ್ರ ಜಗಳ ನಡೆದಿದೆ.

ವಾಗ್ವಾದ ವಿಕೋಪಕ್ಕೆ ಹೋದಾಗ, ಕೋಪೋದ್ರಿಕ್ತನಾದ ಗಜೇಂದ್ರ ಮನೆಯಲ್ಲಿದ್ದ ಕಬ್ಬಿಣದ ರಾಡ್‌ನಿಂದ ಪತ್ನಿಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಗಂಭೀರ ರಕ್ತಸ್ರಾವದಿಂದ ಸಪ್ನಾ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ.

ಪೊಲೀಸರಿಗೆ ಕರೆ ಮಾಡಿ ಕೊಲೆ ಒಪ್ಪಿಕೊಂಡ ಪತಿ:

ಕೃತ್ಯ ಎಸಗಿದ ಬೆನ್ನಲ್ಲೇ ಆರೋಪಿ ಗಜೇಂದ್ರ ಸ್ವತಃ ಪೊಲೀಸರ ಕಂಟ್ರೋಲ್ ರೂಂಗೆ ಕರೆ ಮಾಡಿ, ತಾನು ಪತ್ನಿಯನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ಮಾಹಿತಿ ಪಡೆದು ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಪ್ನಾಳನ್ನು ಆಸ್ಪತ್ರೆಗೆ ಸಾಗಿಸಿದರಾದರೂ, ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ASP) ಅಲೋಕ್ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಗಜೇಂದ್ರನನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಟ್ಯಾಗ್‌ಗಳು: Featured INDIA