ಇಂದೋರ್: ಸಹೋದರನ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಅತ್ತಿಗೆ-ನಾದಿನಿ ನಡುವೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿ, ನಾದಿನಿಯನ್ನು ಚಾಕುವಿನಿಂದ ಇರಿದು ಕೊಂದು ಶವವನ್ನು ನೀರಿನ ಟ್ಯಾಂಕ್‌ಗೆ ಎಸೆದಿರುವ ಭೀಕರ ಘಟನೆ ಮಧ್ಯಪ್ರದೇಶದ ಇಂದೋರ್‌ನ ರಾವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವಂದನಾ (21) ಕೊಲೆಯಾದ ದುರ್ದೈವಿ. ಕೃತ್ಯ ಎಸಗಿದ ಆಕೆಯ ಅತ್ತಿಗೆ ಪಾರ್ವತಿ ಬಾಯಿ ಕುಶ್ವಾಹ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದು, ಕೊಲೆಗೆ ಬಳಸಿದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ.
ನೀರಿನ ಟ್ಯಾಂಕ್‌ನಲ್ಲಿ ಪತ್ತೆಯಾದ ಶವ:
ರಾವ್ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ನೆಹರು ನಗರದಲ್ಲಿ ಬೀಗ ಹಾಕಲಾಗಿದ್ದ ಮನೆಯೊಂದರ ಹೊರಗಿದ್ದ ನೀರಿನ ಟ್ಯಾಂಕ್‌ನಲ್ಲಿ ವಂದನಾ ಅವರ ಮೃತದೇಹ ಪತ್ತೆಯಾಗಿತ್ತು. ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ, ಕೊಲೆ ನಡೆದಿರುವುದು ಸ್ಪಷ್ಟವಾಗಿತ್ತು.
ಪ್ರಕರಣ ಬೆನ್ನತ್ತಿದ ಪೊಲೀಸರು ಪರಿಸರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಪಾರ್ವತಿ ಬಾಯಿ ಸಂಶಯಾಸ್ಪದವಾಗಿ ಮನೆಯಿಂದ ಹೊರಹೋಗುತ್ತಿರುವುದು ಕಂಡುಬಂದಿದೆ. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು, ಸ್ಥಳೀಯ ಅರಬಿಂದೋ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತನ್ನ ಪತಿಯನ್ನು ನೋಡಲು ತೆರಳಿದ್ದ ಪಾರ್ವತಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದರು.
ಜಗಳ ವಿಕೋಪಕ್ಕೆ ತಿರುಗಿ ಕುತ್ತಿಗೆಗೆ ಇರಿತ:
ವಿಚಾರಣೆ ವೇಳೆ ಆರೋಪಿ ಪಾರ್ವತಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ತನ್ನ ಸಹೋದರನ ಬಗ್ಗೆ ವಂದನಾ ಕೀಳಾಗಿ ಮಾತನಾಡಿದ್ದರಿಂದ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಗಲಾಟೆ ಮಿತಿಮೀರಿದಾಗ ಆಕ್ರೋಶಗೊಂಡ ಪಾರ್ವತಿ, ಚಾಕುವಿನಿಂದ ವಂದನಾ ಅವರ ಕುತ್ತಿಗೆಗೆ ಎರಡು ಬಾರಿ ಬಲವಾಗಿ ಇರಿದಿದ್ದಾಳೆ. ತೀವ್ರ ರಕ್ತಸ್ರಾವದಿಂದ ವಂದನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬಳಿಕ ಕೊಲೆ ಮುಚ್ಚಿಹಾಕಲು, ಮೃತದೇಹವನ್ನು ಮನೆಯಿಂದ ಹೊರಗೆ ಎಳೆದುಕೊಂಡು ಬಂದು ರಸ್ತೆ ಬದಿಯಲ್ಲಿದ್ದ ನೀರಿನ ಟ್ಯಾಂಕ್‌ಗೆ ಹಾಕಿ ಪರಾರಿಯಾಗಿದ್ದಳು.
ಪ್ರೇಮ ವಿವಾಹ ಹಾಗೂ ಕೌಟುಂಬಿಕ ಕಲಹ:
ಆಗಸ್ಟ್ 11 ರಂದು ವಂದನಾ ಅವರು ಉಪೇಂದ್ರ ಎಂಬಾತನನ್ನು ಪ್ರೀತಿಸಿ ವಿವಾಹವಾಗಿದ್ದರು. ಆದರೆ ಈ ವಿವಾಹಕ್ಕೆ ಕುಟುಂಬಸ್ಥರ ವಿರೋಧವಿತ್ತು. ಅಲ್ಲದೆ, ವಂದನಾ ಅವರ ಮಾದಕ ವ್ಯಸನದ ನಡವಳಿಕೆ ಬಗ್ಗೆಯೂ ಕುಟುಂಬದಲ್ಲಿ ಅಸಮಾಧಾನವಿತ್ತು ಎನ್ನಲಾಗಿದೆ. ವಿವಾಹದ ನಂತರ ಉಪೇಂದ್ರ ಮತ್ತು ವಂದನಾ ರಾಜ್ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು. ಈ ನಡುವೆ ವಂದನಾ ಕಾಣೆಯಾಗಿದ್ದ ಬಗ್ಗೆ ಚಂದನ್ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವೂ ದಾಖಲಾಗಿತ್ತು.
ರಕ್ಷಾಬಂಧನದ ದಿನದಂದು ಮನೆಯಲ್ಲಿ ಇಬ್ಬರೇ ಇದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಪಾರ್ವತಿಯ ಮಕ್ಕಳು ಶಾಲೆಗೆ ತೆರಳಿದ್ದರೆ, ಆಕೆಯ ಪತಿ ಮತ್ತು ಸೋದರಮಾವ ಆಸ್ಪತ್ರೆಯಲ್ಲಿದ್ದರು.
ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಕೆಲವೇ ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ನರೇಂದ್ರ ಸಿಂಗ್ ರಾವತ್ ತಿಳಿಸಿದ್ದಾರೆ. ಆರೋಪಿ ಪಾರ್ವತಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.
