ಬುದ್ಧಿವಂತ ಸಿನಿಮಾ ರೀತಿ ಮದುವೆಯಾಗಿ ಯುವತಿಯರಿಗೆ ಕೈಕೊಡುವುದೇ ಈತನ ಚಾಳಿ: ನಯವಂಚಕನನ್ನು ಬಂಧಿಸಿ ಜೈಲಿಗಟ್ಟಿದ ಪೊಲೀಸರು
ಬೆಂಗಳೂರು: ಮದುವೆಯಾಗಿ ಐದಾರು ತಿಂಗಳು ಸಂಸಾರ ಮಾಡಿ ಯುವತಿಯರಿಗೆ ವಂಚಿಸಿ ದುಡ್ಡು, ಒಡವದ ದೋಚಿ ಪರಾರಿಯಾಗುತ್ತಿದ್ದ ನಯವಂಚಕ ಯುವಕ ಪೊಲೀಸ್ ಕೈಗೆ ಸಿಕ್ಕಬಿದ್ದಿದ್ದಾನೆ.
ಈತ ಉಪೇಂದ್ರರ ಬುದ್ಧಿವಂತ ಸಿನಿಮಾದ ಹೀರೋ ಸ್ಟೈಲ್‌ನಲ್ಲಿ ಯುವತಿಯರನ್ನು ಮದುವೆಯಾಗಿ ವಂಚಿಸುವುದನ್ನೇ ಕಾಯಕ ಮಾಡಿಕೊಂಡಿದ್ದ. ಬೆಂಗಳೂರಿನ ಪಟ್ಟೇಗಾರಪಾಳ್ಯ ನಿವಾಸಿ ಮಿಥುನ್ ಕುಮಾರ್ ಎಂಬಾತನೇ ಯುವತಿಯರನ್ನು ಪರಿಚಯಿಸಿಕೊಂಡು ಪ್ರೀತಿಯ ನಾಟಕವಾಗಿ ಮದುವೆಯಾಗುತ್ತಾನೆ. ಆರು ತಿಂಗಳ ಕಾಲ ಸಂಸಾರ ನಡೆಸಿ ಅವರ ದುಡ್ಡು, ಒಡವೆ ದೋಚಿ ಪರಾರಿಯಾಗುತ್ತಾನೆ. ಅದರಂತೆ ಪರಿಚಯವಾಗಿದ್ದ ಯುವತಿಯನ್ನು ಮದುವೆಯಾಗಿ ಮೋಸ ಮಾಡಿದ್ದಾನೆ. ಇದೀಗ ಪೊಲೀಸರು, ಮಿಥುನ್ ಕುಮಾರ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
6ವರ್ಷಗಳ ಹಿಂದೆ ಯುವತಿಯೊಬ್ಬಳನ್ನು ಮಿಥುನ್ ಕುಮಾರ್ ಪರಿಚಯ ಮಾಡಿಕೊಂಡಿದ್ದಾನೆ. ಆಕೆಯೊಂದಿಗೆ ಪ್ರೀತಿಯ ನಾಟಕವಾಡಿ ಒಂದು ವರ್ಷದ ಹಿಂದೆ ಆಕೆಯನ್ನು ವಿವಾಹ ಆಗಿದ್ದಾನೆ. ನಾಲ್ಕು ತಿಂಗಳು ಚೆನ್ನಾಗಿ ಸಂಸಾರ ಮಾಡಿದ್ದಾನೆ. ನಂತರ ದುಡ್ಡು, ಒಡವೆ ದೋಚಿಕೊಂಡು ಪರಾರಿಯಾಗಿದ್ದ. ಈ ಸಂಬಂಧ ಮೋಸ ಹೋದ ಯುವತಿ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ವಂಚಕ ಮಿಥುನ್ ನನ್ನು ಬಂಧಿಸಿದ್ದಾರೆ. ತಂದೆ ತಾಯಿ ಇಲ್ಲದ ಅಮಾಯಕ ಯುವತಿಯರನ್ನೇ ಟಾರ್ಗೆಟ್ ಮಾಡಿ ವಂಚಿಸುವ ಮಿಥುನ್ ಕುಮಾರ್ ಕಾಯಕವಾಗಿದೆ.
ಈ ಹಿಂದೆಯೂ ಇದೇ ರೀತಿಯ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದಾನೆ. ಈ ಹಿಂದೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಮಿಥುನ್ ಕುಮಾರ್ ವಿರುದ್ಧ ಅತ್ಯಾಚಾರ ಕೇಸ್ ದಾಖಲಾಗಿತ್ತು. ಆಗ 6ತಿಂಗಳು ಜೈಲು ಶಿಕ್ಷೆ ಅನುಭವಿಸಿ, ಜಾಮೀನಿನ ಮೇಲೆ ಹೊರಗೆ ಬಂದಿದ್ದ. ಆದರೂ ಬುದ್ಧಿ ಕಲಿಯದ ಮಿಥುನ್, ಮತ್ತೆ ಬೇರೊಬ್ಬ ಯುವತಿಯನ್ನು ನಂಬಿಸಿ ಮದುವೆಯಾಗಿ ಕೈ ಕೊಟ್ಟು ಇದೀಗ ಮತ್ತೆ ಜೈಲು ಪಾಲಾಗಿದ್ದಾನೆ.