ಮಂಗಳೂರು ವಿವಿ ವಿದ್ಯಾರ್ಥಿ ಪರಿಷತ್ ಉದ್ಘಾಟನೆಗೆ ಕಲ್ಲಡ್ಕ ಪ್ರಭಾಕರ ಭಟ್ ಗೆ ಆಹ್ವಾನ: ವಿರೋಧಿಸಿ ಸಿಎಫ್ಐ ಪ್ರತಿಭಟನೆ, ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ
Wednesday, March 30, 2022
ಮಂಗಳೂರು: ನಗರದ ಕೊಣಾಜೆಯ ಮಂಗಳೂರು ವಿವಿ ಮಂಗಳಗಂಗೋತ್ರಿ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿ ಪರಿಷತ್ ಕಾರ್ಯಕ್ರಮ ಉದ್ಘಾಟನಾ ಕಾರ್ಯಕ್ರಮಕ್ಕೆ ಆರ್ ಎಸ್ ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ ಆಹ್ವಾನ ನೀಡಿರುವುದನ್ನು ವಿರೋಧಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ವಿವಿ ಗೇಟ್ ಮುಂಭಾಗ ಪ್ರತಿಭಟನೆ ನಡೆಸಿತು.
ಪ್ರತಿಭಟನೆ ವೇಳೆ ಕಲ್ಲಡ್ಕ ಪ್ರಭಾಕರ ಭಟ್ ಗೋ ಬ್ಯಾಕ್ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು. ಅಲ್ಲದೆ ಮಂಗಳೂರು ವಿವಿಗೆ ಮುತ್ತಿಗೆ ಹಾಕಲು ಯತ್ನಿಸಿರುವ ಪ್ರತಿಭಟನಾಕಾರರನ್ನು ತಡೆದ ಪೊಲೀಸರು, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ವಿದ್ಯಾರ್ಥಿ ನಾಯಕ ಹಾಗೂ ಕೆಲ ವಿದ್ಯಾರ್ಥಿಗಳನ್ನು ವಶಕ್ಕೆ ತೆಗೆದುಕೊಂಡರು.
ಮಂಗಳೂರು ವಿವಿಯ ಅಧಿಕೃತ ಕಾರ್ಯಕ್ರಮಕ್ಕೆ ಕೋಮುದ್ವೇಷ ಬಿತ್ತುವ ಭಾಷಣಗಾರರನ್ನು ಕರೆದಲ್ಲಿ ಶೈಕ್ಷಣಿಕ ವಾತಾವರಣದಲ್ಲೂ ಕೋಮುವೈಷಮ್ಯ ಬೆಳೆಯುವ ಸಾಧ್ಯತೆ ಇದೆ. ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರು ಜಿಲ್ಲೆಯಾದ್ಯಂತ ಕೋಮು ದ್ವೇಷದ ಭಾಷಣ ಮಾಡಿ ಸಮಾಜದ ಶಾಂತಿಗೆ ಧಕ್ಕೆ ತರುವಂತಹ ಕೆಲಸ ಮಾಡಿದ್ದಾರೆ. ಇಂಥವರನ್ನು ವಿವಿ ಕಾರ್ಯಕ್ರಮಕ್ಕೆ ಆಹ್ವಾನ ಮಾಡಿರುವುದು ದುರದೃಷ್ಟಕರ. ಆದ್ದರಿಂದ ಮಂಗಳೂರು ವಿವಿ ವಿದ್ಯಾರ್ಥಿ ಪರಿಷತ್ ಉದ್ಘಾಟನೆ ಮಾಡಲು ಕಲ್ಲಡ್ಕ ಪ್ರಭಾಕರ ಭಟ್ಟರ ಹೆಸರನ್ನು ಕೈಬಿಡಬೇಕು ಎಂದು ಮಂಗಳೂರು ವಿವಿ ಕುಲಪತಿ ಡಾ.ಪಿ.ಎಸ್.
ಯಡಪಡಿತ್ತಾಯ ಅವರಿಗೆ ಸಿಎಫ್ಐ ಕಾರ್ಯಕರ್ತರು ಮನವಿ ಮಾಡಿದರು.