ತಮಿಳುನಾಡಿನಲ್ಲಿ ಹುಟ್ಟಿಬಂದ ಇನ್ನೊಬ್ಬ ಅಬ್ದುಲ್ ಕಲಾಂ
Thursday, March 3, 2022
ಚೆನ್ನೈ: ಏಷಿಯಾ ವಿಲ್ಲೆ ಎಂಬ ತಮಿಳು ಯ್ಯೂಟ್ಯೂಬ್ ಚಾನೆಲ್ ಒಂದು ಅಭಿಯಾನದಂಗವಾಗಿ ನೀವು ಯಾರನ್ನು, ಯಾಕೆ ದ್ವೇಷಿಸುತ್ತೀರಿ ಎಂಬ ಪ್ರಶ್ನೆಯನ್ನು ಪ್ರೇಕ್ಷಕರ ಬಳಿ ಕೇಳಿತ್ತು.
ಈ ಪ್ರಶ್ನೆಯನ್ನು ಹಲವರ ಬಳಿ ಕೇಳುತ್ತಾ ಬಂದಿದ್ದ ವರದಿಗಾರ ಒಂದು ಪುಟ್ಟ ಬಾಲಕನ ಬಳಿಯೂ ಈ ಪ್ರಶ್ನೆ ಕೇಳಿದ್ದ. ಆದರೆ ಈ ಪ್ರಶ್ನೆಗೆ ಬಾಲಕನ ಉತ್ತರ ಎಲ್ಲರನ್ನೂ ಬೆರಗುಗೊಳಿಸಿತ್ತು.
ಅಂದಹಾಗೆ ಆ ಬಾಲಕನ ಹೆಸರು ಅಬ್ದುಲ್ ಕಲಾಂ. 11 ವರ್ಷ ವಯಸ್ಸು. ನಿನಗೆ ಯಾರನ್ನು ಕಂಡರೆ ಇಷ್ಟವಿಲ್ಲ ಎಂಬ ಪ್ರಶ್ನೆಗೆ ಆತನ ಉತ್ತರ ಈ ರೀತಿ ಇತ್ತು.
"ನಾವು ಯಾಕೆ ಯಾರನ್ನಾದರೂ ದ್ವೇಷಿಸಬೇಕು? ಈ ಜಗತ್ತಿನಲ್ಲಿ ಎಲ್ಲರೂ ಸಮಾನರು ತಾನೇ. ನಾವು ಯಾರನ್ನೂ ದ್ವೇಷಿಸಬಾರದು. ಎಲ್ಲರೂ ನಮ್ಮಂತೆಯೇ. ಕೆಲವರಿಗೆ ಕಷ್ಟ ಇರಬಹುದು. ಅದನ್ನು ನಾವು ಹೊರಗೆ ತೋರಿಸಬಾರದು. ಒಳಗಡೆ ಇಟ್ಟುಕೊಳ್ಳಬೇಕು. ನನ್ನ ಹಲ್ಲಿನ ಬಗ್ಗೆಯೂ ಹಲವರು ಕುಹಕ ಮಾಡುತ್ತಾರೆ. ಆದರೂ ನಾನು ಅವರನ್ನು ದ್ವೇಷಿಸುತ್ತಿಲ್ಲ ಎಂದು ಉತ್ತರಿಸಿದ್ದಾನೆ.
ಈ ವೀಡಿಯೋ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿ ಹಲವರನ್ನು ತಲುಪಿದೆ. ಇದನ್ನು ನೋಡಿದ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಕೂಡಾ ಆತನನ್ನು ತನ್ನ ಕಚೇರಿಗೆ ಕರೆದು ಸನ್ಮಾನಿಸಿದ್ದಾರೆ. ಅಲ್ಲದೇ ಸ್ವಂತ ಮನೆಯಿಲ್ಲದ ಅಬ್ದುಲ್ ಕಲಾಂ ಕುಟುಂಬಕ್ಕೆ ಮನೆ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.