ಮಂಗಳೂರು ಮೂಲದ ಬಿ ಆರ್ ಶೆಟ್ಟಿಗೆ ಭಾರೀ ಹಿನ್ನಡೆ: ಲಂಡನ್ ಬ್ಯಾಂಕ್ ಬಾರ್ಕ್ಲೇಸ್ ಗೆ 131 ಮಿಲಿಯನ್ ಪಾವತಿಸಲು ಕೋರ್ಟ್ ಆದೇಶ
Tuesday, January 11, 2022
ಲಂಡನ್: ಭಾರತೀಯ ಮೂಲದ ಅಬುಧಾಬಿಯ ಉದ್ಯಮಿ ಕೋಟ್ಯಾಧಿಪತಿ ಬಿ ಆರ್ ಶೆಟ್ಟಿಯವರಿಗೆ ಭಾರೀ ಹಿನ್ನಡೆ ಉಂಟಾಗಿದೆ. ವಿದೇಶಿ ವಿನಿಮಯ ವ್ಯವಹಾರ ವಹಿವಾಟುಗಳ ಒಪ್ಪಂದದ ಅಂಗವಾಗಿ ಲಂಡನ್ ಬ್ಯಾಂಕ್ ಬಾರ್ಕ್ಲೇಸ್ ಗೆ ಪೂರ್ಣ ಮೊತ್ತ ಪಾವತಿಸಬೇಕೆಂದು ಲಂಡನ್ ಕೋರ್ಟ್ ಆದೇಶ ಹೊರಡಿಸಿದೆ. ಈ ಮೂಲಕ ಅವರು 131 ಮಿಲಿಯನ್ (ಭಾರತೀಯ ಕರೆನ್ಸಿ 9,68,27,99,500 ರೂ.) ಪಾವತಿಸಬೇಕಿದೆ.
2020 ರಲ್ಲಿ ಲಂಡನ್ ಬ್ಯಾಂಕ್ ಬಾರ್ಕ್ಲೇಸ್ ನೊಂದಿಗೆ ವಿದೇಶಿ ವಿನಿಮಯ ವ್ಯಾಪಾರ ವಹಿವಾಟು ಒಪ್ಪಂದ ಮಾಡಿಕೊಂಡಿದ್ದರು. ಇದೇ ವಿಚಾರವಾಗಿ ದುಬೈ ಕೋರ್ಟ್ ಬಿ.ಆರ್ ಶೆಟ್ಟಿ ವಿರುದ್ಧ ದೊಡ್ಡ ಮೊತ್ತದ ಹಣವನ್ನು ಪಾವತಿಸಬೇಕೆಂದು ತೀರ್ಪು ನೀಡಿತ್ತು. ದುಬೈ ನ್ಯಾಯಾಲಯವು ನೀಡಿರುವ ತೀರ್ಪನ್ನು ಪ್ರಶ್ನಿಸಿ ಬಿ.ಆರ್.ಶೆಟ್ಟಿ ಲಂಡನ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣದ ಕುರಿತು ಕಳೆದ ವರ್ಷ ಡಿಸೆಂಬರ್‌ನಲ್ಲಿ ಬ್ರಿಟನ್ ನ್ಯಾಯಾಲಯ ವಿಚಾರಣೆಯ ಸಂದರ್ಭ ಬಿ.ಆರ್.ಶೆಟ್ಟಿ ಪರ ವಕೀಲರು 'ತಮ್ಮ ಕಕ್ಷಿದಾರರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅವರಿಗೆ ನೀಡುವ ತೀರ್ಪನ್ನು ಮುಂದೂಡಬೇಕು' ಎಂದು ಕೋರಿದ್ದರು.
ಎರಡೂ ಕಡೆಯ ವಾದವನ್ನು ಆಲಿಸಿರುವ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು 2022ರ ಜನವರಿ 10ಕ್ಕೆ ಮುಂದೂಡಿತ್ತು. ನಿನ್ನೆ ಮತ್ತೆ ಪ್ರಕರಣದ ವಿಚಾರಣೆಯನ್ನು ಲಂಡನ್ ಕೋರ್ಟ್ ನಡೆಸಿದೆ. ಈ ಸಂದರ್ಭ ಬಿ.ಆರ್.ಶೆಟ್ಟಿಯವರ ಪರ ವಕೀಲರು ಬಾರ್ಕ್ಲೇಸ್ ಗೆ ಪಾವತಿಸಬೇಕಿರುವ, ತಮ್ಮ ಕಕ್ಷಿದಾರರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ತೀರ್ಪನ್ನು ಮುಂದೂಡುವಂತೆ ಮತ್ತೊಮ್ಮೆ ನ್ಯಾಯಾಲಯವನ್ನು ಕೋರಿದರು. ಆದರೆ ಲಂಡನ್ ಕೋರ್ಟ್ ಆ ಮನವಿಯನ್ನು ತಿರಸ್ಕರಿಸಿ, ಬಿ ಆರ್ ಶೆಟ್ಟಿ ಬ್ಯಾಂಕ್ ಬಾರ್ಕ್ಲೇಸ್‌ಗೆ 131 ಮಿಲಿಯನ್ ರೂ ಪಾವತಿಸಲು ಆದೇಶಿಸಿದೆ. ಜೊತೆಗೆ ಭಾರತ ಸೇರಿದಂತೆ ಇತರ ದೇಶಗಳು, ಲಂಡನ್ ನಲ್ಲಿರುವ ಬಿ.ಆರ್.ಶೆಟ್ಟಿ ಅವರ ಆಸ್ತಿ ಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಬ್ಯಾಂಕ್ ಪ್ರತಿನಿಧಿಗಳು ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿದ್ದಾರೆ.