ಊಟ ಕೊಡುವುದಾಗಿ ನಂಬಿಸಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪ್ರಾಪ್ತ ಬಾಲಕ ...
Sunday, December 12, 2021
ಹಾವೇರಿ: ಊಟ ಕೊಡುವುದಾಗಿ ಬಾಲಕಿಯನ್ನು ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ ಅಪ್ರಾಪ್ತ ಬಾಲಕನಿಗೆ 10 ವರ್ಷಗಳ ಕಠಿಣ ಸಜೆ ಹಾಗೂ 5 ಸಾವಿರ ರೂ. ದಂಡವನ್ನು ವಿಧಿಸಲಾಗಿದೆ.
2018ರ ಜನವರಿ 16ರಂದು ಬಾಲಕಿಗೆ ಊಟದ ಆಮಿಷ ತೋರಿಸಿ ಬಾಲಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದ ಕುರಿತು ದೂರು ದಾಖಲಿಸಲಾಗಿತ್ತು. ಪೊಲೀಸ್ ವೃತ್ತ ನಿರೀಕ್ಷಕರು ಪ್ರಕರಣದ ತನಿಖೆ ನಡೆಸಿ, ಬಾಲಕನ ವಿರುದ್ಧ ಸಾಕ್ಷಾಧಾರಗಳು ದೃಢಪಟ್ಟಿದ್ದರಿಂದ ಬಾಲ ನ್ಯಾಯ ಮಂಡಳಿಗೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನಂತರ ಈ ಪ್ರಕರಣವು ಮಕ್ಕಳ ನ್ಯಾಯಾಲಯಕ್ಕೆ ವರ್ಗಾವಣೆಯಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಆತನಿಗೆ ಪೋಕ್ಸೋ ಕಾಯ್ದೆ ಕಲಂ 6ನೇದ್ದರಡಿ 10 ವರ್ಷಗಳ ಕಠಿಣ ಶಿಕ್ಷೆ, 5 ಸಾವಿರ ರೂ. ದಂಡ ಹಾಗೂ ಸಂತ್ರಸ್ತೆಗೆ 1 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿ ತೀರ್ಪು ನೀಡಿದ್ದಾರೆ.