ಅಚ್ಚರಿಗೆ ಕಾರಣವಾಯಿತು ಪಾಕಿಸ್ಥಾನದ ಮಾಜಿ ಸೈನ್ಯಾಧಿಕಾರಿಗೆ ನೀಡಿದ 'ಪದ್ಮಶ್ರೀ: ಆದರೆ ಅದಕ್ಕೆ 'ವಿಶೇಷ' ಕಾರಣವೂ ಇದೆ
Thursday, November 11, 2021
ನವದೆಹಲಿ: ಈ ಬಾರಿಯ ಪದ್ಮಶ್ರೀ ಪುರಸ್ಕೃತ ರ ಪೈಕಿ ಪಾಕಿಸ್ತಾನದ ಮಾಜಿ ಯೋಧರೊಬ್ಬರ ಹೆಸರು ಕೂಡಾ ಇದೆ. ಪಾಕಿಸ್ತಾನದ ಮಾಜಿ ಸೈನಿಕ ಲೆಫ್ಟಿನೆಂಟ್ ಕರ್ನಲ್ ಖಾಝಿ ಸಜ್ಜಾದ್ ಅಲಿ ಝಹೀರ್ ಅವರ ಹೆಸರು ಇದ್ದದ್ದು, ಹಲವು ಭಾರತೀಯರನ್ನು ಆಶ್ಚರ್ಯಕ್ಕೀಡು ಮಾಡಿತ್ತು.
ಅವರಿಗೆ ಈ ಅತ್ಯುನ್ನತ ಪ್ರಶಸ್ತಿ ನೀಡಲು ಕಾರಣವೂ ಇದೆ. 1971ರ ಯುದ್ಧದಲ್ಲಿ ಪ್ರಾಣಾಪಾಯವನ್ನು ಲೆಕ್ಕಿಸದೇ ಭಾರತದ ಗಡಿಯೊಳಗೆ ಆಗಮಿಸಿ ಬಾಂಗ್ಲಾದೇಶದ ವಿಮೋಚನೆಗೆ ನಡೆಸಿದ ಹೋರಾಟ ಹಾಗೂ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಭಾರತಕ್ಕೆ ಅವರು ನೀಡಿದ ನೆರವನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.
ಲೆಫ್ಟಿನೆಂಟ್ ಕರ್ನಲ್ ಝಹೀರ್ ಅವರು ಭಾರತೀಯ ಗುಪ್ತಚರ ವ್ಯವಸ್ಥೆಗೆ ಮತ್ತು ಬಾಂಗ್ಲಾದೇಶದ ಸ್ವಾತಂತ್ರ್ಯ ಚಳವಳಿಗೆ ನೀಡಿದ ಗಣನೀಯ ಕೊಡುಗೆಗಾಗಿ ಪದ್ಮಶ್ರೀ ಗೌರವ ನೀಡಲಾಗಿದೆ.
1971ರಲ್ಲಿ ಸಿಯಾಲ್ ಕೋಟೆಯಲ್ಲಿ ನಿಯೋಜನೆಗೊಂಡಿದ್ದ 20 ವರ್ಷ ವಯಸ್ಸಿನ ಝಹೀರ್ ತಮ್ಮ ಜೀವಕ್ಕೆ ಇದ್ದ ಅಪಾಯವನ್ನೂ ಲೆಕ್ಕಿಸದೇ ಭಾರತಕ್ಕೆ ನೆರವಾಗಿದ್ದರು. ಹಿಂದಿನ ಪೂರ್ವ ಪಾಕಿಸ್ತಾನದಲ್ಲಿ (ಇಂದಿನ ಬಾಂಗ್ಲಾದೇಶ) ಪಾಕಿಸ್ತಾನ ಸೇನೆ ನಡೆಸುತ್ತಿದ್ದ ದೌರ್ಜನ್ಯ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯ ನಡುವೆಯೇ ಪಕ್ಕದ ಭಾರತದ ಗಡಿಯೊಳಕ್ಕೆ ಆಗಮಿಸಿದ್ದರು.
ಭಾರತಕ್ಕೆ ಆಗಮಿಸಿದ ಮೊದಲ ಹಂತದಲ್ಲಿ ಸಂಕಷ್ಟಗಳನ್ನು ಎದುರಿಸಿದ್ದರೂ, ಬಳಿಕ ಅವರು ಇಲ್ಲಿನ ಗುಪ್ತಚರ ಇಲಾಖೆಗೆ ನೆರವಾಗತೊಡಗಿದರು. ಬಳಿಕ ಬಾಂಗ್ಲಾದ ಯೋಧರಿಗೂ ತರಬೇತಿ ನೀಡುವ ಮೂಲಕ ನೆರವಾಗಿದ್ದರು.
ಬಾಂಗ್ಲಾದೇಶದಲ್ಲಿ ಝಹೀರ್ ಅವರಿಗೆ ಬೀರ್ ಪ್ರೊಟಿಕ್ ಶೌರ್ಯ ಪ್ರಶಸ್ತಿ ಮತ್ತು ದೇಶದ ಅತ್ಯುನ್ನತ ಗೌರವವಾದ ಸ್ವದಿಂತ ಪದಕ ನೀಡಿ ಗೌರವಿಸಲಾಗಿದೆ.