
ನಿಧಿ ಆಸೆಗಾಗಿ ಮಹಿಳೆಯನ್ನೇ ನಗ್ನಗೊಳಿಸಿ ಪೂಜೆ!
Thursday, November 11, 2021
ರಾಮನಗರ: ಭೂಮಿಯಲ್ಲಿನ ನಿಧಿ ತೆಗೆಯುವುದಾಗಿ ಹೇಳಿ ಮಹಿಳೆಯೋರ್ವಳನ್ನು ನಗ್ನಗೊಳಿಸಿ ಪೂಜೆ ನಡೆಸಿರುವ ಘಟನೆ ಜಿಲ್ಲೆಯ ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಸಾತನೂರು ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ಪಾರ್ಥಸಾರಥಿ, ನಾಗರಾಜು, ಶಶಿಕುಮಾರ್, ಲೋಕೇಶ್, ಮೋಹನ್, ಲಕ್ಷ್ಮೀ ನರಸಪ್ಪ ಬಂಧಿತರು.
ಇವರ ವಿರುದ್ಧ ಮೌಢ್ಯ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಸಾತನೂರು ಸಮೀಪದ ಭೂಹಳ್ಳಿಯಲ್ಲಿ ಶ್ರೀನಿವಾಸ ಎಂಬವರು ಪತ್ನಿ ಜೊತೆ ವಾಸವಾಗಿದ್ದರು. ಇವರ ಜಮೀನಿನಲ್ಲಿ ನಿಧಿ ಇದೆ ಎಂದು ಬಂಧಿತ ಆರೋಪಿಗಳು ನಂಬಿಸಿದ್ದರು. ನಿಧಿ ತೆಗೆಯುವುದಾಗಿ ಶ್ರೀನಿವಾಸ್ ಮನೆಯಲ್ಲಿ ಕೆಲ ಪೂಜೆಗಳನ್ನು ನಡೆಸಿದ್ದರು. ನಿಧಿ ಮೇಲೆ ಬರಲು ನಗ್ನ ಪೂಜೆ ಮಾಡಬೇಕಿದ್ದು, ಇದಕ್ಕಾಗಿ ಪೂಜೆ ವೇಳೆ ಶ್ರೀನಿವಾಸ್ ಪತ್ನಿಗೆ ನಗ್ನವಾಗಿ ನಿಲ್ಲುವಂತೆ ಹೇಳಿದ್ದರು. ಆದರೆ ಆಕೆ ಅದಕ್ಕೆ ಒಪ್ಪಿರಲಿಲ್ಲ.
ಬಳಿಕ ಮೇಸ್ತ್ರಿ ಪಾರ್ಥಸಾರಥಿ ಬಳಿ ಕೂಲಿ ಕೆಲಸ ಮಾಡಿಕೊಂಡಿದ್ದ ಮಹಿಳೆಯನ್ನು 50 ಸಾವಿರ ರೂ. ನೀಡಿ ಒಪ್ಪಿಸಿದ್ದು, ಆಕೆಯನ್ನು ಪೂಜೆಗೆ ನಗ್ನವಾಗಿ ನಿಲ್ಲಿಸಲಾಗಿತ್ತು.
ಪೂಜೆಯ ಬಳಿಕ ಫಲ ಕಂಡು ಬರದಿದ್ದಾಗ ಈಕೆ ಚೆನ್ನಾಗಿಲ್ಲ. ಮುಂದಿನ ಬಾರಿ ಸುಂದರವಾದ ಯುವತಿಯನ್ನು ಕರೆತನ್ನಿ ಇನ್ನೊಂದು ಪೂಜೆ ಮಾಡುವ ಎಂದು ಪೂಜಾರಿ ಶಶಿಕುಮಾರ್ ತಿಳಿಸಿದ್ದ. ಹೀಗಾಗಿ ಮುಂದಿನ ಮಂಗಳವಾರ ಮತ್ತೊಂದು ಯುವತಿಯೊಂದಿಗೆ ಪೂಜೆಗೆ ತಯಾರಾಗಿದ್ದರು ಎಂದು ತಿಳಿದು ಬಂದಿದೆ.
ಆದರೆ ಅದೇ ದಿನ ಖಚಿತ ಮಾಹಿತಿ ಮೇರೆಗೆ ಪೂಜೆ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಅಲ್ಲಿ ಮಹಿಳೆ ನಗ್ನವಾಗಿ ನಿಂತಿದ್ದಳು. ಪೊಲೀಸರು ಅಲ್ಲಿದ್ದ ಆರು ಮಂದಿಯನ್ನು ಬಂಧಿಸಿದ್ದು, ಮಹಿಳೆಯನ್ನು ರಕ್ಷಿಸಿದ್ದಾರೆ.