ತನ್ನ ಹೆಂಡತಿಯನ್ನೇ ಆಕೆಯ boyfriend ಜೊತೆ ಮದುವೆ ಮಾಡಿಸಿದ ಗಂಡ!
Friday, November 12, 2021
ಕಾನ್ಪುರ/ ಉ.ಪ್ರ.: ಐದು ತಿಂಗಳ ಹಿಂದೆ ಮದುವೆಯಾದ ವ್ಯಕ್ತಿಯೋರ್ವ ತನ್ನ ಹೆಂಡತಿಯನ್ನೇ ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿ ಕಳಿಸಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಗುರುಗ್ರಾಮದ ಖಾಸಗಿ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಪಂಕಜ್ ಶರ್ಮಾ ಮೇ ತಿಂಗಳಲ್ಲಿ ಕೋಮಲ್ ಎಂಬ ಯುವತಿಯನ್ನು ಮದುವೆಯಾಗಿದ್ದ. ಮದುವೆಯಾದ ದಿನದಿಂದಲೂ ಕೋಮಲ್ ಗಂಡನ ಜೊತೆಗಾಗಲಿ, ಗಂಡನ ಮನೆಯವರೊಂದಿಗಾಗಲಿ ಮಾತನಾಡಿರಲಿಲ್ಲ. ಕೋಮಲ್ ಅವಳಷ್ಟಕ್ಕೇ ಇರುತ್ತಿದ್ದಳು. ಇದರಿಂದ ಆತನಿಗೆ ಬಹಳ ಗೊಂದಲವಾಗಿತ್ತು.
ಆದರೆ ಕೆಲ ದಿನಗಳ ನಂತರ ಆಕೆ ಬೇರೆಯವನನ್ನು ಪ್ರೀತಿಸುತ್ತಿದ್ದಳು ಎನ್ನುವ ವಿಚಾರ ಶರ್ಮಾನಿಗೆ ತಿಳಿದಿದೆ. ಈ ಬಗ್ಗೆ ಗಂಡ ಕೋಮಲ್ ಬಳಿ ವಿಚಾರಿಸಿದಾಗ ಆಕೆ ಲವ್ ವಿಚಾರ ಹೇಳಿದ್ದು, ತನಗೆ ತನ್ನ ಪ್ರೇಮಿ ಜೊತೆ ಜೀವನ ನಡೆಸಬೇಕು ಎಂಬುದನ್ನು ತಿಳಿಸಿದ್ದಳು.
ಈ ವಿಚಾರವನ್ನು ಪಂಕಜ್ ಶರ್ಮ ಕೋಮಲ್‍ಳ ತಂದೆ, ತಾಯಿಗೆ ಹೇಳಿದ. ಅವರು ತಮ್ಮ ಮಗಳಿಗೆ ಬುದ್ಧಿ ಹೇಳಲು ಸಾಕಷ್ಟು ಪ್ರಯತ್ನಿಸಿದರು. ಆದರೆ ಆಕೆ ತನ್ನ ಪ್ರೇಮಿಯನ್ನು ಮರೆಯಲು ಸಾಧ್ಯವಿಲ್ಲ ಎಂದು ಹಠ ಹಿಡಿದಿದ್ದಾಳೆ.
ಕೊನೆಗೂ ದಾರಿ ಕಾಣದಾದಾಗ ಪಂಕಜ್, ಕೋಮಲ್ ಹಾಗೂ ಆಕೆಯ ಪ್ರಿಯಕರನನ್ನು ಕರೆಸಿ ಮಾತನಾಡಿದ್ದಾನೆ. ಆಗ ಕೋಮಲ್ ತಾನು ಪಂಕಜ್ ಜೊತೆ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರಿಂದ ಪಂಕಜ್ ತಾನೇ ಮುಂದೆ ನಿಂತು ಕೋಮಲ್ ಮದುವೆ ಪ್ರಿಯಕರನ ಜೊತೆ ಮಾಡಿಸುವುದಾಗಿ ಹೇಳಿದ್ದಾನೆ. ಮರುದಿನವೇ ಪಂಕಜ್ ಶರ್ಮ ಆಕೆಯ ಪ್ರೇಮಿಯ ಜೊತೆ ಮದುವೆ ಮಾಡಿಸಿದ್ದಾನೆ.