
'ಆತ'ನನ್ನು ಮದುವೆಯಾದಳೆಂದು ಅಪ್ಪನೇ ಮಗಳನ್ನು ಅರೆನಗ್ನಗೊಳಿಸಿ ಹಿಂಸಿಸಿದ
Tuesday, November 2, 2021
ಭೋಪಾಲ್: ದಲಿತ ಯುವಕನನ್ನು ಪ್ರೀತಿಸಿ ಮದುವೆಯಾದದಕ್ಕೆ ಯುವತಿಯ ಅಪ್ಪನೇ ಮಗಳನ್ನು ಅರೆನಗ್ನಗೊಳಿಸಿ ಹಿಂಸಿಸಿದ ಘಟನೆ ಮಧ್ಯಪ್ರದೇಶದ ಭೋಪಾಲ್‌ನ ಛೋಪ್ನಾ ಗ್ರಾಮದಲ್ಲಿ ನಡೆದಿದೆ.
ಭೋಪಾಲ್‌ನ ಛೋಪ್ನಾ ಗ್ರಾಮದ ಯುವತಿಯೋರ್ವಳು ನೆರೆಯ ಬೈತೂಲ್ ಪಟ್ಟಣದ ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು. ಕಳೆದ ವರ್ಷ ಮಾರ್ಚ್ 11 ರಂದು ಇವರಿಬ್ಬರೂ ಮದುವೆಯಾಗಿ ಪರಾರಿಯಾಗಿದ್ದರು. ಈ ವಿಷಯ ತಿಳಿಯುತ್ತಲೇ ಯುವತಿಯ ತಂದೆ ಆಕೆಯನ್ನು ಹುಡುಕಿ ಕರೆತಂದು ಹಾಸ್ಟೆಲ್‌ನಲ್ಲಿ ಇರಿಸಿದ್ದರು. ಆದರೆ ಯುವತಿ ಅಲ್ಲಿಂದ ಮತ್ತೆ ತಪ್ಪಿಸಿಕೊಂಡು ಪುನಃ ಪತಿ ಮನೆಗೆ ಹೋಗಿದ್ದಳು.
ಪತಿ ಮನೆಯಿಂದ ಮತ್ತೆ ಮಗಳನ್ನು ಕರೆತಂದ ಅಪ್ಪ ಮತ್ತು ಇತರರು ನೇರವಾಗಿ ಆಕೆಯನ್ನು ನರ್ಮದಾ ನದಿಗೆ ಕರೆದುಕೊಂಡು ಹೋಗಿ ಅಲ್ಲಿ ಅರೆಬೆತ್ತಲೆ ಮಾಡಿದ್ದಾರೆ. ಸುಮಾರು ನಾಲ್ಕು ಮಂದಿಯಷ್ಟಿದ್ದ ಜನರು ಆಕೆಯ ಅರೆನಗ್ನ ದೇಹಕ್ಕೆ ಹಿಂಸೆ ನೀಡಿದ್ದಲ್ಲದೇ, ಬಳಿಕ ಆಕೆಯನ್ನು ನದಿಯಲ್ಲಿ ಮುಳುಗಿಸಿದ್ದರು.
ಇದಾದ ಬಳಿಕ ಆಕೆಯ ಕೂದಲು ಕತ್ತರಿಸಿ ಹಿಂಸೆ ನೀಡಿದ್ದಲ್ಲದೇ, ಎಂಜಲು ಊಟ ತಿನ್ನಿಸಿದ್ದಾರೆ ಎಂದು ಯುವತಿಯೇ ಮಾಹಿತಿ ನೀಡಿದ್ದಾಳೆ.
ಈ ರೀತಿ ಯಾಕೆ ಹಿಂಸಿಸುತ್ತೀರಿ ಎಂದು ಕೇಳಿದ್ದಕ್ಕೆ ನೀನು ದಲಿತನನ್ನು ಮದುವೆಯಾಗಿದ್ದಿಯಲ್ಲ, ಅದಕ್ಕೆ ನಿನ್ನನ್ನು ಶುದ್ಧೀಕರಿಸುತ್ತಿದ್ದೇವೆ ಎಂದು ಹೇಳಿದ್ದಾರೆಂದು ಯುವತಿ ಹೇಳಿದ್ದಾಳೆ.
ಇದಾದ ಬಳಿಕ ನೀನು ಶುದ್ಧಿಯಾಗಿದ್ದಿ, ಇನ್ನು ಗಂಡನಿಗೆ ವಿಚ್ಚೇದನ ನೀಡಿ ಬಳಿಕ ನಮ್ಮದೇ ಜಾತಿಯ ಯುವಕನನ್ನು ಮದುವೆಯಾಗುವಂತೆ ಮನೆಯವರು ಒತ್ತಾಯ ಮಾಡುತ್ತಿದ್ದಾರೆಂದು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
ಒಂದು ವೇಳೆ ಮಾತು ಕೇಳದಿದ್ದರೆ ಗಂಡನನ್ನು ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ಹೇಳಿರುವ ಯುವತಿ, ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾಳೆ, ಜತೆಗೆ ತನ್ನ ರಕ್ಷಣೆಗಾಗಿ ಮಾಧ್ಯಮಗಳ ಮುಂದೆಯೂ ಬಂದು ನಡೆದ ಘಟನೆ ವಿವರಿಸಿದ್ದಾಳೆ.