ನಿಮಗೆ ಮದುವೆಯಾಗಿಲ್ಲವೇ? ನಿಮ್ಮದು live in relationship? ಹಾಗಾದರೆ ನಿಮಗೆ ಈ ಹಕ್ಕುಗಳು ಇಲ್ಲ
Thursday, November 4, 2021
ಚೆನ್ನೈ: ಕಾನೂನುಬದ್ಧವಲ್ಲದ ವಿವಾಹ/ ಸಹಜೀವನದ ಜೋಡಿಗಳು ಕೌಟುಂಬಿಕ ನ್ಯಾಯಾಲಯದಲ್ಲಿ ವೈವಾಹಿಕ ವಿವಾದದ ಮೊಕದ್ದಮೆ ಹೂಡುವ ಕಾನೂನು ಹಕ್ಕು ಇಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ವಿಚ್ಛೇದನ ಕಾಯ್ದೆ 1869ರ ಸೆಕ್ಷನ್ 32ರ ಅಡಿ ವೈವಾಹಿಕ ಹಕ್ಕುಗಳನ್ನು ಪಡೆಯಲು ಕೊಯಂಬತ್ತೂರಿನ ಕಲೈಸೆಲ್ವಿ ಎಂಬವರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿ ಮದ್ರಾಸ್ ಹೈಕೋರ್ಟ್ ಈ ತೀರ್ಪು ನೀಡಿದೆ.
ಈ ವಿಚಾರವಾಗಿ ಕಲೈಸೆಲ್ವಿ ಕೊಯಮತ್ತೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು 2019ರ ಫೆಬ್ರುವರಿ 14 ರಂದು ತಿರಸ್ಕರಿಸಿತ್ತು. ನಂತರ ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಕಾನೂನುಬದ್ಧವಾಗಿ ವಿವಾಹ ನೆರವೇರದಿದ್ದಾಗ ಅವರು ಎಷ್ಟೇ ಸುದೀರ್ಘವಾಗಿ ಸಹಜೀವನ ನಡೆಸಿದವರಾಗಿದ್ದರೂ, ಅವರಿಗೆ ವೈವಾಹಿಕ ಹಕ್ಕುಗಳಿಗಾಗಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಕಾನೂನು ಹಕ್ಕು ಇರುವುದಿಲ್ಲ' ಎಂದು ನ್ಯಾಯಮೂರ್ತಿಗಳಾದ ಎಸ್. ವೈದ್ಯನಾಥನ್ ಮತ್ತು ಆರ್. ವಿಜಯಕುಮಾರ್ ಅವರಿದ್ದ ವಿಭಾಗೀಯ ಪೀಠ ತೀರ್ಪು ನೀಡಿದೆ.