
ಪುನೀತ್ ನಿಧನದ ಬಳಿಕ ಆತ್ಮಹತ್ಯೆ ಗೈದ ಅಭಿಮಾನಿಗಳು ಎಷ್ಟು ಗೊತ್ತಾ? ಈ ಬಗ್ಗೆ ರಾಘವೇಂದ್ರ ರಾಜ್‌ಕುಮಾರ್ ಕೈಮುಗಿದು ಕೇಳಿಕೊಂಡದ್ದೇನು?
ಬೆಂಗಳೂರು: ಪುನೀತ್ ರಾಜ್‍ಕುಮಾರ್ ಹೃದಯಾಘಾತದಿಂದ ನಿಧನರಾದ ಬಳಿಕ ಅಭಿಮಾನಿಗಳು ಸರಣಿಯಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಪುನೀತ್ ರಾಜ್‍ಕುಮಾರ್ ಅಣ್ಣ ರಾಘವೇಂದ್ರ ರಾಜ್‌ಕುಮಾರ್ ಬೇಸರ ವ್ಯಕ್ತಪಡಿಸಿದ್ದು, ದಯವಿಟ್ಟು ಅಭಿಮಾನಿಗಳು ಈ ರೀತಿಯ ಕೃತ್ಯ ಎಸಗಬಾರದು ಎಂದು ವಿನಂತಿಸಿಕೊಂಡಿದ್ದಾರೆ.
'ಹಲವು ಅಭಿಮಾನಿಗಳ ಸಾವಿಗೆ ನಮ್ಮ ಯಜಮಾನರು ಕಾರಣರಾದರಲ್ಲ' ಎಂದು ಪುನೀತ್ ರಾಜ್‍ಕುಮಾರ್ ಪತ್ನಿಯೂ ಬೇಸರಿಸಿದ್ದಾರೆಂದು ರಾಘವೇಂದ್ರ ರಾಜ್‌ಕುಮಾರ್ ಮಾಧ್ಯಮಗಳ ಮುಂದೆ ತಿಳಿಸಿದ್ದಾರೆ.
ಪುನೀತ್ ನಿಧನದಿಂದ ನಾವೆಲ್ಲಾ ನೋವಿನಲ್ಲಿ ಇದ್ದೇವೆ. ನೀವು ಈ ರೀತಿ (ಆತ್ಮಹತ್ಯೆ) ಮಾಡಿಕೊಳ್ಳುವ ಮೂಲಕ ಆ ನೋವನ್ನು ನಿಮ್ಮ ಮನೆಯವರಿಗೂ ಕೊಡಬೇಡಿ ಎಂದು ಹೇಳಿದ ರಾಘವೇಂದ್ರ ರಾಜ್‌ಕುಮಾರ್ ಈ ರೀತಿಯ ಗೌರವ ಅವರಿಗೆ ಬೇಕಾಗಿಲ್ಲ. ನೀವು ಅವರು ಬಿಟ್ಟು ಹೋಗಿರುವ ಉತ್ತಮ ವ್ಯಕ್ತಿತ್ವಗಳನ್ನು ಅಳವಡಿಸಿ ಎಂದರು.
ನಾವು ಈಗಾಗಲೇ ನೋವಿನಲ್ಲಿ ಇದ್ದೇವೆ. ನಮಗೆ ಇನ್ನಷ್ಟು ನೋವು ಕೊಡಬೇಡಿ. ನೀವು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ನಿಮ್ಮ ಕುಟುಂಬಕ್ಕಾದ ನಷ್ಟಕ್ಕೆ ನಾವು ಹೊಣೆಗಾರರಾಗುತ್ತೇವೆ. ಹಾಗಾಗಿ ದಯವಿಟ್ಟು ಯಾರೂ ಇಂತಹ ಕೃತ್ಯಗಳನ್ನು ಮಾಡಬೇಡಿ ಎಂದು ಅವರು ನೋವಿನಿಂದಲೇ ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡರು.
ಒಬ್ಬರು ಹೋದರೆಂದು ಅವರ ಹಿಂದೆ ಎಲ್ಲರೂ ಹೋದರೆ ಈ ಭೂಮಿ ಮೇಲೆ ಯಾರು ಉಳಿಯುತ್ತಾರೆ? ಇದು ಸರಿಯಾದ ನಿರ್ಧಾರವಲ್ಲ. ಅಪ್ಪು ಪಾಲಿಗೆ ಅಭಿಮಾನಿಗಳು ದೇವರು. ದೇವರುಗಳು ಇಂತಹ ಕೆಲಸ ಮಾಡಬಾರದು ಎಂದು ಪರಿಪರಿಯಾಗಿ ಬೇಡಿಕೊಂಡರು.
ಒಂದು ಅಂಕಿ ಅಂಶದ ಪ್ರಕಾರ ಪುನೀತ್ ರಾಜ್‍ಕುಮಾರ್ ನಿಧನದ ಬಳಿಕ ಒಟ್ಟು 12 ಮಂದಿ ಅಭಿಮಾನಿಗಳು ಆತ್ಮಹತ್ಯೆ ಮಾಡಕೊಂಡಿದ್ದಾರಂತೆ