ಕೋವಿಡ್ ವಿರುದ್ಧ ಗೆಲುವು ಘೋಷಿಸಿದ ಈ ಗಲ್ಫ್ ರಾಷ್ಟ್ರ: ಸಂತಸ ಹಂಚಿಕೊಂಡ ಯುವರಾಜ
Sunday, October 10, 2021
ಅಬುಧಾಬಿ: ಇತ್ತೀಚಿನ ದಿನಗಳಲ್ಲಿ ಯುಎಇ ಯಾದ್ಯಂತ ಅತೀ ಕಡಿಮೆ ಕೊರೋನಾ ಪ್ರಕರಣಗಳು ವರದಿಯಾಗ ತೊಡಗಿದ್ದು, ಕೋವಿಡ್ ವಿರುದ್ಧ ಜಯಗಳಿಸಿರುವುದಾಗಿ ಅಲ್ಲಿನ ಯುವರಾಜ ಸಂತಸ ಹಂಚಿಕೊಂಡಿದ್ದಾರೆ.
ಈ ವಿಚಾರವಾಗಿ ಸುದ್ದಿ ಸಂಸ್ಥೆ WAM ಜೊತೆ ಮಾಹಿತಿ ಹಂಚಿಕೊಂಡಿರುವ ಅಬುಧಾಬಿ ಯುವರಾಜ ಮುಹಮ್ಮದ್ ಬಿನ್ ಝಾಯಿದ್ 'ನಾವು ಸಹಜ ಜೀವನದತ್ತ ಮರಳುತ್ತಿದ್ದೇವೆ. ನಮ್ಮ ಕೆಲಸದ ರೀತಿ, ಅಧ್ಯಯನದಿಂದಾಗಿ ಇಲ್ಲಿ ಮಹತ್ತರ ಬದಲಾವಣೆಗಳಾಗಿದೆ. ಇದಕ್ಕೆಲ್ಲಾ ನಾನು ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ' ಎಂದು ಹೇಳಿದ್ದಾರೆ.
ಈ ಸಾಂಕ್ರಾಮಿಕ ಸಂಕಷ್ಟದ ಕಾಲದಲ್ಲಿ ನಾವು ಭಾರೀ ಬೆಲೆಯನ್ನು ತೆತ್ತಿದ್ದೇವೆ. ಮತ್ತು ಇದರಿಂದ ಬಹುದೊಡ್ಡ ಪಾಠವನ್ನು ಕಲಿತಿದ್ದೇವೆ. ಕೊನೆಗೂ ನಾವು ಬಿಕ್ಕಟ್ಟನ್ನು ಯಶಸ್ವಿಯಾಗಿ ನಿಭಾಯಿಸಿ ಜಯಗಳಿಸಿದ್ದೇವೆ ಎಂದು ಯುವರಾಜ ಹೇಳಿಕೊಂಡಿದ್ದಾರೆ.
ಕಳೆದ ಆಗಸ್ಟ್ ತಿಂಗಳಿನಿಂದ 200ರ ಒಳಗೆ ಕೋವಿಡ್ ಪ್ರಕರಣಗಳು ದಾಖಲಾಗುತ್ತಿದ್ದು, ಇದು ಅತ್ಯಂತ ಕನಿಷ್ಟ ಪ್ರಕರಣವಾಗಿದೆ.
ಯುಎಇಯ ಜನಜೀವನ ಬಹುತೇಕವಾಗಿ ಸಹಜತೆಯೆಡೆಗೆ ಮರಳಿದ್ದೂ, ಮಾಸ್ಕ್ ಧಾರಣೆ ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳುವಿಕೆಯ ಮೊದಲಾದ ಕಟ್ಟುನಿಟ್ಟಿನ ನಿಯಮಗಳನ್ನು ಮುಂದುವರಿಸಿದೆ.