
ರಾಷ್ಟ್ರ ರಾಜಕಾರಣಕ್ಕೆ ಒಲ್ಲೆ ಅಂದ್ರಾ ಸಿದ್ದರಾಮಯ್ಯ? ಸೋನಿಯಾ ಆಹ್ವಾನ ತಿರಸ್ಕರಿಸಿದ್ದೇಕೆ?
ನವದೆಹಲಿ: ಇತ್ತೀಚೆಗೆ ಸಿದ್ದರಾಮಯ್ಯರ ದೆಹಲಿ ಭೇಟಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ದೆಹಲಿಯಲ್ಲಿ ಅವರು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಜೊತೆ ಚರ್ಚೆಯನ್ನೂ ನಡೆಸಿದ್ದರು.
ಈ ಭೇಟಿಗೆ ಎರಡು ಉದ್ದೇಶಗಳಿವೆಯೆಂದು ವ್ಯಾಖ್ಯಾನಿಸಲಾಗಿತ್ತು. ಒಂದು ಸಿದ್ದರಾಮಯ್ಯರನ್ನು ರಾಷ್ಟ್ರ ರಾಜಕಾರಣಕ್ಕೆ ಸೇರಿಸಿ ಆ ಮೂಲಕ ಡಿಕೆಶಿ ಜೊತೆಗಿನ ಮುಸುಕಿನ ಗುದ್ದಾಟಕ್ಕೆ ಇತಿಶ್ರೀ ಹಾಡುವುದು.
ಆದರೆ ಸೋನಿಯಾ ಆಹ್ವಾನವನ್ನೆಲ್ಲಾ ಸಿದ್ದು ನಾಜೂಕಾಗಿಯೇ ತಿರಸ್ಕರಿಸಿದ್ದಾರೆ ಎನ್ನುತ್ತಿವೆ ದೆಹಲಿ ಮೂಲಗಳು.
ಕಾಂಗ್ರೆಸ್ ಪಕ್ಷ ರಾಷ್ಟ್ರ ಮಟ್ಟದಲ್ಲಿ ವರ್ಚಸ್ಸು ಕಳೆದುಕೊಂಡಿದ್ದು, ರಾಷ್ಟೀಯ ನಾಯಕತ್ವದ ಬಗ್ಗೆ ಹಿರಿಯ ಮುಖಂಡರು ಅಸಮಾಧಾನ ಹೊಂದಿದ್ದಾರೆ. ಈ ಕಾರಣವಾಗಿ ಕೆಲವರು ಪಕ್ಷ ಬಿಟ್ಟಿದ್ದು, ಕೆಲವರು ಇದ್ದೂ ಇಲ್ಲದಂತೆ ಇದ್ದಾರೆ.
ಈ ನಡುವೆ ಕಾಂಗ್ರೆಸ್ ಗೆ ವರ್ಚಸ್ಸಿನ ನಾಯಕನ ಅಗತ್ಯವಿದ್ದು, ಅದಕ್ಕೆ ಸಿದ್ದರಾಮಯ್ಯನೇ ಸೂಕ್ತ ಎಂದು ಅವರಿಗೆ ಆಹ್ವಾನ ನೀಡಲಾಗಿದೆ.
ದಕ್ಷಿಣ ಭಾರತದಲ್ಲಿ ಎಲ್ಲೂ ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲ. ಆದರೆ ಕರ್ನಾಟಕದಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಇದನ್ನೇ ಮನಗಂಡಿರುವ ಸಿದ್ದು, 2023ರ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟು, ಇಲ್ಲೇ ಠಿಕಾಣಿ ಹೂಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಸೋನಿಯಾ ಬಳಿಯೂ ಪ್ರಸ್ತಾಪಿಸಿದ್ದಾರೆ ಎನ್ನಲಾಗುತ್ತಿದೆ.