
ಮುಸ್ಲಿಂ ಮದುವೆ ಹಿಂದೂಗಳ ಮದುವೆಯಂತೆ ಅಲ್ಲ: ಅದೊಂದು.......: ಈ ಬಗ್ಗೆ ಕರ್ನಾಟಕ ಹೈಕೋರ್ಟ್ ಹೇಳಿದ್ದೇನು?
Thursday, October 21, 2021
ಬೆಂಗಳೂರು: ಮುಸ್ಲಿಂ ಮದುವೆಗಳು ಹಲವು ಅರ್ಥಗಳ ಒಪ್ಪಂದವಾಗಿದೆ. ಹಿಂದೂ ವಿವಾಹದಂತೆ ಒಂದು ಸಂಸ್ಕಾರವಲ್ಲ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ವಿಚ್ಛೇದನ ಸಂಬಂಧ ಇಜಾಝುರ್ ರೆಹಮಾನ್ ಹಾಗೂ ಸಾಯಿರಾ ಬಾನು ಪ್ರಕರಣ ವಿಚಾರ ವೇಳೆ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಹಿಂದೂ ವಿವಾಹದ ರೀತಿಯ ಸಂಸ್ಕಾರ ಮುಸ್ಲಿಂ ಮದುವೆಯಲ್ಲಿ ಇಲ್ಲ. ಮುಸ್ಲಿಂ ಮದುವೆ ಒಪ್ಪಂದ ಮಾತ್ರ. ಹೀಗಾಗಿ ವಿಚ್ಚೇದನ ವೇಳೆ ಉದ್ಭವಿಸವು ಹಕ್ಕುಗಳು ಹಾಗೂ ಬಾಧ್ಯತೆಗಳಿಗೆ ಸೂಕ್ತ ಪರಿಹಾರ ಒದಗಿಸಲು ಅಡೆತಡೆಗಳಿವೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಘಟನೆ ಹಿನ್ನೆಲೆ:
ಇಜಾಝುರ್ ರೆಹಮಾನ್ ತನ್ನ ಪತ್ನಿ ಸಾಯಿರಾ ಬಾನುಗೆ 1991ರ ನವೆಂಬರ್ 25 ರಂದು ತಲಾಖ್ ಮೂಲಕ ವಿಚ್ಚೇದನ ನೀಡಿದ್ದರು. ಈ ವೇಳೆ ಕೇವಲ 5,000 ರೂಪಾಯಿ ನೀಡಿ ವಿಚ್ಚೇದನ ಪಡೆದುಕೊಂಡಿದ್ದರು. ಬಳಿಕ ರಹೆಮಾನ್ ಮತ್ತೊಂದು ವಿವಾಹವಾಗಿದ್ದಾರೆ.
ಇತ್ತ ಸಾಯಿರಾ ಬಾನು ನಿರ್ವಹಣೆ ವೆಚ್ಚ ನೀಡಬೇಕು ಎಂದು 2002ರಲ್ಲಿ ಸಿವಿಲ್ ಮೊಕದ್ದಮೆ ಹೊಡಿದ್ದರು. ಸಾಯಿರಾ ಬಾನು ಪ್ರಕರಣ ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಾಲಯ ಮಾಸಿಕ ನಿರ್ವಹಣೆಗೆ ಮಾಸಿಕ 3,000 ರೂಪಾಯಿ ನೀಡಬೇಕು ಎಂದು ಸೂಚಿಸಿತ್ತು. ಸಾಯಿರಾ ಬಾನು ಮರು ವಿವಾಹವಾಗುವರೆಗೆ ಅಥವಾ ಸಾಯಿರಾ ಬಾನು ಮರಣದ ವರೆಗೆ ಮಾಸಿಕ ನಿರ್ವಹಣೆ ವೆಚ್ಚ ನೀಡಬೇಕು ಎಂದು ಆದೇಶಿಸಿತ್ತು.
ಆದರೆ ಈ ಆದೇಶ ರದ್ದುಗೊಳಿಸುವಂತೆ ರೆಹಮಾನ್ ಕೋರಿದ ಅರ್ಜಿ ವಿಚಾರಣೆ ನಡೆಸಿದ ಜಸ್ಟೀಸ್ ದೀಕ್ಷಿತ್, ಮುಸ್ಲಿಂ ವಿವಾಹ ಒಂದು ಸಂಸ್ಕಾರವಲ್ಲ, ವಿಚ್ಚೇದನದಿಂದ ವಿವಾಹದ ಎಲ್ಲಾ ಕಟ್ಟುಪಾಡುಗಳು ಮುರಿದುಬೀಳುತ್ತದೆ. ಮುಸ್ಲಿಮರ ವಿವಾಹವೂ ಒಪ್ಪಂದವಾಗಿದೆ. ಹೀಗಾಗಿ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.