ಮೃತ ವ್ಯಕ್ತಿಯ ಮೊಬೈಲ್ ಕಾಣೆಯಾಗಿದೆ ಎಂದು ದೂರು ನೀಡಿದ ಸಂಬಂಧಿ: ತನಿಖೆ ನಡೆಸಿದಾಗ ಮೊಬೈಲ್ ಎಲ್ಲಿತ್ತು ಗೊತ್ತಾ?
Monday, October 11, 2021
ತಿರುವನಂತಪುರಂ: ಅಸಹಜ ಸಾವಿಗೀಡಾದ ವ್ಯಕ್ತಿಯೋರ್ವನ ಮೊಬೈಲ್ ಅನ್ನು ಕದ್ದು ಬಳಸುತ್ತಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಒಬ್ಬರು ಸದ್ಯ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ.
ಚಾಥನ್ನೂರ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಜ್ಯೋತಿ ಸುಧಾಕರ್ ಮೊಬೈಲ್ ಕದ್ದು ಬಳಸಿ ಅಮಾನತಾದ ಪೊಲೀಸ್ ಅಧಿಕಾರಿ.
ಘಟನೆ ಹಿನ್ನೆಲೆ: ಜುಲೈನಲ್ಲಿ ಚಾಥನ್ನೂರ್ ಪೊಲೀಸ್ ಠಾಣಾ ವ್ಯಾಪ್ತಿಯ ಕನಿಯಾಪುರಂ ರೈಲು ನಿಲ್ದಾಣ ದ ಬಳಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ. ತನಿಖೆ ನಡೆಸಿದ ಚಾಥನ್ನೂರ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಜ್ಯೋತಿ ಸುಧಾಕರ್ ಇದೊಂದು ಆತ್ಮಹತ್ಯೆ ಎಂದು ದೂರು ದಾಖಲಿಸಿದ್ದರು.
ಸ್ಥಳ ಮಹಜಿರಿನ ವೇಳೆ ಮೃತದೇಹದ ಬಳಿ ಎಸ್‌ಐ ಮೊಬೈಲ್ ಅನ್ನು ಗಮನಿಸಿದ್ದರು. ಶವಕ್ಕೆ ಮೊಬೈಲ್ ಏಕೆ ಎಂದು ಎಸ್ಐ ಆ ಮೊಬೈಲ್ ಅನ್ನು ಎಗರಿಸಿದ್ದ.
ಅಲ್ಲದೇ ಈ ಮೊಬೈಲ್‌ಗೆ ತನ್ನ ಅಧಿಕೃತ ಸಿಮ್ ಕಾರ್ಡನ್ನು ಹಾಕಿ ಬಳಸುತ್ತಿದ್ದ.
ಆದರೆ ಎಸ್ ಐಯ ನಸೀಬು ಸರಿ ಇರಲಿಲ್ಲ. ಈ ಸಾವಿನಲ್ಲಿ ಅನುಮಾನ ವ್ಯಕ್ತಪಡಿಸಿ ಮತ್ತು ಮೊಬೈಲ್ ಕಳವಾಗಿರುವುದಾಗಿ ಮೃತ ವ್ಯಕ್ತಿಯ ಸಂಬಂಧಿಯೊರ್ವ ದೂರು ನೀಡಿದ್ದ.
ತನಿಖೆ ನಡೆಸಿದ ಸೈಬರ್ ಸೆಲ್ ಪೊಲೀಸರಿಗೆ ಮೊಬೈಲ್ ಎಸ್ ಐ ಬಳಿ ಇರುವುದಾಗಿ ಪತ್ತೆಯಾಗಿದೆ. ಅಲ್ಲದೇ ಈ ಮೊಬೈಲ್ ನಲ್ಲಿ ತನ್ನ ಸಿಮ್ ಹಾಕಿ ಬಳಸುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಮೊಬೈಲ್ ಅನ್ನು ವಶಪಡಿಸಿ ಎಸ್ಐಯನ್ನು ಅಮಾನತುಗೊಳಿಸಲಾಗಿದೆ.