Mobile ಖರೀದಿಸಲು ತನ್ನ ಪತ್ನಿಯನ್ನೇ ಮಾರಿದ 17ರ ಬಾಲಕ
Tuesday, October 26, 2021
ಭುವನೇಶ್ವರ: ಹೈಫೈ ಮೊಬೈಲ್ ಖರೀದಿಸಬೇಕೆಂಬ ಆಸೆಯಲ್ಲಿ ಯುವತಿಯೋರ್ವಳನ್ನು ಮದುವೆಯಾದ 17 ವರ್ಷದ ಬಾಲಕ ಬಳಿಕ ಆಕೆಯನ್ನು ಮಾರಾಟ ಮಾಡಿ ಮೊಬೈಲ್ ಖರೀದಿಸಿ ಪೇಚಿಗೆ ಸಿಲುಕಿರುವ ಘಟನೆ ಒಡಿಶಾದಲ್ಲಿ ನಡೆದಿದೆ.
ಆ 17 ವರ್ಷದ ಅಪ್ರಾಪ್ತ ಬಾಲಕನಿಗೆ ಒಂದು ಉತ್ತಮ ಮೊಬೈಲ್ ಖರೀದಿಸಬೇಕೆಂಬ ಬಯಕೆ ಇತ್ತು. ಅದಕ್ಕಾಗಿ ಆತ 26 ವರ್ಷದ ಯುವತಿಯನ್ನು ಮದುವೆಯಾಗಿದ್ದ. ಬಳಿಕ ಆತ ಕೆಲಸದ ನೆಪದಲ್ಲಿ ಪತ್ನಿಯೊಂದಿಗೆ ರಾಜಸ್ಥಾನಕ್ಕೆ ತೆರಳಿದ್ದು, ಅಲ್ಲಿ ಪತ್ನಿಯ ಮಾರಾಟಕ್ಕಾಗಿ ತಲಾಶೆ ನಡೆಸಿದ್ದಾನೆ.
ಅದೇ ವೇಳೆ ಆತನಿಗೆ 55 ವರ್ಷದ ವ್ಯಕ್ತಿಯೋರ್ವ ದೊರೆತಿದ್ದು, ಆತನಿಗೆ ಪತ್ನಿಯನ್ನು ಮಾರಿದ್ದಾನೆ. ಮಾರಾಟ ಮಾಡಿ ದೊರೆತ ಹಣದಲ್ಲಿ ಆಸೆಯಂತೆ ಮೊಬೈಲ್ ಖರೀದಿಸಿದ್ದು, ಉಳಿದ ಹಣದಲ್ಲಿ ಪಾರ್ಟಿ ಮಾಡಿದ್ದಾನೆ.
ಕೈಯಲ್ಲಿದ್ದ ಹಣವೆಲ್ಲಾ ಖಾಲಿಯಾದ ಬಳಿಕ ಊರಿಗೆ ಮರಳಿದ್ದು, ಊರಲ್ಲಿ ಪತ್ನಿಯ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಪತ್ನಿ ಯಾರೊಂದಿಗೋ ಓಡಿ ಹೋಗಿದ್ದಾಳೆಂದು ಬಾಲಕ ಹೇಳಿದ್ದು, ಅನುಮಾನಗೊಂಡ ಯುವತಿ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರು ಅವರದೇ ಶೈಲಿಯಲ್ಲಿ ವಿಚಾರಿಸಿದಾಗ ನಡೆದ ಘಟನೆಯ ಬಗ್ಗೆ ಬಾಯಿ ಬಿಟ್ಟಿದ್ದಾನೆ.
ಕೊನೆಗೂ ಪೊಲೀಸರು ಯುವತಿಯನ್ನು ಪತ್ತೆಹಚ್ಚಿದ್ದು, ಖರೀದಿಸಿದ ವ್ಯಕ್ತಿಯಿಂದ ಯುವತಿಯನ್ನು ಮರಳಿ ಪಡೆಯಲು ತೆರಳಿದ್ದರು. ಈ ವೇಳೆ ನಾನು ನೀಡಿದ ಹಣ ವಾಪಸ್ ನೀಡಿದರೆ ಮಾತ್ರ ಯುವತಿಯನ್ನು ನೀಡುವುದಾಗಿ ಆತ ಹೇಳಿದ್ದ. ಕೊನೆಗೂ ಯುವತಿ ಮನೆಯವರು ಹಣ ಹೊಂದಿಸಿ ಕೊಟ್ಟಿದ್ದು, ಯುವತಿಯನ್ನು ವಾಪಸ್ ಕರೆ ತಂದಿದ್ದಾರೆ.