ಆಸ್ಪತ್ರೆಗೆ ದಾಖಲಾಗಿದ್ದು ಕಿಡ್ನಿ ಕಲ್ಲು ತೆಗೆಯಲು; ಕಲ್ಲು ಬಿಟ್ಟು ಕಿಡ್ನಿಯನ್ನೇ ತೆಗೆದ ವೈದ್ಯರು!
Thursday, October 21, 2021
ಅಹ್ಮದಾಬಾದ್: ಕಿಡ್ನಿಯಲ್ಲಿನ ಕಲ್ಲು ತೆಗೆಯಲೆಂದು ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿಯ ಕಿಡ್ನಿಯನ್ನೇ ಆಪರೇಷನ್ ಮಾಡಿ ತೆಗೆದ ನಿರ್ಲಕ್ಷ್ಯ ದ ಘಟನೆ ಮಹಿಸಾಗರ್ ಜಿಲ್ಲೆಯ ಬಾಲಸಿನೋರ್‌ನಲ್ಲಿರುವ ಕೆಎಂಜಿ ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ.
ಬಳಿಕ ರೋಗಿ ಮೃತಪಟ್ಟಿದ್ದು, ರೋಗಿಯ ಸಂಬಂಧಿಕರು ಈ ಹಿನ್ನೆಲೆಯಲ್ಲಿ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಮೃತರ ಕುಟುಂಬಸ್ಥರ ವಾದ ಆಲಿಸಿದ ಅಹಮದಾಬಾದ್‌ನ ಗ್ರಾಹಕ ನ್ಯಾಯಾಲಯವು ಆಸ್ಪತ್ರೆಗೆ 11.23 ಲಕ್ಷ ರೂ.ಗಳನ್ನು ಮೃತ ರೋಗಿಯ ಕುಟುಂಬಸ್ಥರಿಗೆ ಪರಿಹಾರವಾಗಿ ನೀಡುವಂತೆ ಸೂಚಿಸಿದೆ.
ಕೆಎಂಜಿ ಜನರಲ್ ಆಸ್ಪತ್ರೆಯಲ್ಲಿ ಈ ರೋಗಿ ಕಿಡ್ನಿ ಸ್ಟೋನ್‌ಗೆ ಕಳೆದ ನಾಲ್ಕು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರು. ವ್ಯಕ್ತಿಯ ಕಿಡ್ನಿಯಲ್ಲಿನ ಸ್ಟೋನ್ನ ತೆಗೆಯಲು ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಲು ಮುಂದಾಗಿದ್ದಾರೆ. ಆದ್ರೆ ಶಸ್ತ್ರ ಚಿಕಿತ್ಸೆ ವೇಳೆ ಕಿಡ್ನಿಯಲ್ಲಿನ ಕಲ್ಲು ತೆಗೆಯುವ ಬದಲು ಕಿಡ್ನಿಯನ್ನೇ ತೆಗೆದಿದ್ದಾರೆ. ಇದರಿಂದ ರೋಗಿ ಮೃತಪಟ್ಟಿದ್ದಾನೆ.
ವೈದ್ಯರ ಈ ಅಚಾತುರ್ಯದ ಬಳಿಕ ರೋಗಿಯ ಪ್ರಾಣವನ್ನು ಉಳಿಸಲು ಮೂತ್ರಪಿಂಡ ತೆಗೆಯುವುದು ಅನಿವಾರ್ಯವಾಗಿತ್ತು ಎಂದು ಸಮಜಾಯಿಷಿ ನೀಡಿದ್ದರು.