ಸ್ವಂತ ಮಗುವನ್ನೇ ನೀರಿನಲ್ಲಿ ಮುಳುಗಿಸಿ ಕೊಂದ ತಾಯಿ: Google search ನಿಂದ ಬಯಲಾಯಿತು ಕೃತ್ಯ
Friday, October 29, 2021
ಉಜ್ಜಯಿನಿ: ಮೂರು ತಿಂಗಳ ಹಸುಗೂಸನ್ನು ಸ್ವತಃ ತಾಯಿಯೇ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯ ಕಚ್ರೋಡ್‌ನಲ್ಲಿ ನಡೆದಿದೆ.
ಕಚ್ರೋಡ್‌ನಲ್ಲಿ ದಂಪತಿಯೊಂದು ವಾಸವಾಗಿದ್ದು, ಇವರಿಗೆ ಮೂರು ತಿಂಗಳ ಹೆಣ್ಣು ಮಗುವೊಂದಿದೆ. ಆದರೆ ಹೆಂಡತಿ ಗಂಡನಿಂದ ದೂರವಾಗಿ ವಾಸಿಸಲು ಬಯಸಿದ್ದು, ಇದಕ್ಕೆ ಗಂಡ ಒಪ್ಪಿರಲಿಲ್ಲ.
ಇದರಿಂದ ಕೋಪಗೊಂಡ ಮಹಿಳೆ ಮನೆಯ ಮೇಲಿನ ನೀರಿನ ಟ್ಯಾಂಕ್‌ಗೆ ಮಗುವನ್ನು ಮುಳುಗಿಸಿ ಕೊಲೆಗೈದಿದ್ದಾಳೆ. ಬಳಿಕ ಮಗು ಕಾಣೆಯಾಗಿದೆ ಎಂದು ಮನೆಯವರಿಗೆ ತಿಳಿಸಿದ್ದಾಳೆ. ಮನೆಯವರೆಲ್ಲ ಮಗುವಿಗಾಗಿ ಹುಡುಕಾಟ ನಡೆಸಿದ್ದು, ಮಗು ಸಿಗದೇ ಇದ್ದಾಗ ಪೊಲೀಸ್ಠಾಣೆಗೆ ತೆರಳಿ ನಾಪತ್ತೆ ದೂರು ನೀಡಿದ್ದಾರೆ.
ಈ ನಡುವೆ ಪಾಪಿ ತಾಯಿಯೇ ಪೊಲೀಸ್ ಠಾಣೆಯಲ್ಲಿ ಮಗುವನ್ನು ಹುಡುಕಿಕೊಡಿ ಎಂದು ಅಳುವ ನಾಟಕ ಮಾಡಿದ್ದಾಳೆ.
ಪೊಲೀಸರು ಮಗುವಿಗಾಗಿ ಎಲ್ಲ ಕಡೆ ಹುಡುಕಿದ್ದು, ಎಲ್ಲೂ ಮಗು ಸಿಕ್ಕಿರಲಿಲ್ಲ. ಕೊನೆಗೇ ಪೊಲೀಸರಿಗೆ ಮನೆಯವರ ಮೇಲೆ ಅನುಮಾನ ಬಂದಿದ್ದು, ಮನೆ ಸರ್ಚ್ ಮಾಡಿದ್ದಾರೆ. ಈ ವೇಳೆ ಮನೆಯ ಮೂರನೇ ಅಂತಸ್ತಿನಲ್ಲಿರುವ ನೀರಿನ ಟ್ಯಾಂಕ್‌ನಲ್ಲಿ 3 ತಿಂಗಳ ಹೆಣ್ಣು ಮಗುವಿನ ಮೃತ ದೇಹ ಪತ್ತೆಯಾಗಿದೆ. ಆದರೆ ಕೊಲೆ ಮಾಡಿದ್ದು ಯಾರು ಎಂಬುಂದು ಪೊಲೀಸರಗೆ ತಲೆ ನೋವಾಗಿತ್ತು. ಯಾಕಂದರೆ ಮನೆಯಲ್ಲಿ ಒಟ್ಟು 4 ಮಂದಿ ಜೊತೆಯಾಗಿ ವಾಸವಿದ್ದರು.
ಹೀಗಾಗಿ ಪೊಲೀಸರು ಮನೆಯಲ್ಲಿರುವ ಪ್ರತಿಯೊಬ್ಬರನ್ನೂ ವಿಚಾರಣೆಗೆ ಒಳಪಡಿಸಿದ್ದರು.
ತಾಯಿಯ ಮೊಬೈಲ್ ನಲ್ಲಿತ್ತು ಸುಳಿವು:
ಈ ವೇಳೆ ತಾಯಿಯನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಇದೇ ವೇಳೆ ಆಕೆಯ ಫೋನ್ ಚೆಕ್ ಮಾಡಿದ್ದಾರೆ. ಗೂಗಲ್ ಹಾಗೂ ಯೂಟ್ಯೂಬ್ನಲ್ಲಿ ಮಗುವನ್ನು ಕೊಲ್ಲುವುದು ಹೇಗೆ ಎಂಬುದನ್ನು ತಾಯಿ ಸ್ವಾತಿ ಸರ್ಚ್ ಮಾಡಿದ್ದು, ಪೊಲೀಸರ ಗಮನಕ್ಕೆ ಬಂದಿತ್ತು, ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸುತ್ತಿದ್ದಂತೆ ನಡೆದ ಘಟನೆಯನ್ನೆಲ್ಲ ತಾಯಿ ಹೇಳಿದ್ದಾಳೆ.