
ಹಿಂದಿನ ಜನ್ಮದಲ್ಲಿ ಅಸಾದುದ್ದೀನ್ ಉವೈಸಿ ನಕುಲನಾಗಿದ್ದ, ಮೋಹನ್ ಭಾಗ್ವತ್ ಶಕುನಿ ಆಗಿದ್ದ; ಅವರಿಬ್ಬರೂ ನನ್ನ ಗೆಳೆಯರಾಗಿದ್ದರು: ರಜೆಗಾಗಿ ವಿಚಿತ್ರ ಅರ್ಜಿ ಸಲ್ಲಿಸಿದ Deputy engineer
ಬೋಪಾಲ್: ಮಧ್ಯಪ್ರದೇಶದ ಮಾಲ್ವಾ ಜಿಲ್ಲೆಯ ಡೆಪ್ಯುಟಿ ಎಂಜಿನಿಯರ್ ಒಬ್ಬರು ರಜೆಗಾಗಿ ತಮ್ಮ ಹಿರಿಯ ಅಧಿಕಾರಿಗೆ ಬರೆದಿರುವ ಪತ್ರವು ವೈರಲ್ ಆಗಿದ್ದು, ಪತ್ರದ ತುಂಬೆಲ್ಲಾ ಅಸಂಬದ್ದಗಳೇ ತುಂಬಿದೆ.
ತನ್ಮ ಹಿಂದಿನ ಜನ್ಮದ ಪಾಪಗಳನ್ನು ತೊಳೆಯವ ಸಲುವಾಗಿ ಮನೆ ಮನೆಗೆ ತೆರಳಿ ಭಿಕ್ಷೆ ಎತ್ತಲಿದ್ದು ಇದಕ್ಕಾಗಿ ನನಗೆ ಪ್ರತೀ ಆದಿತ್ಯವಾರದಂದು ರಜೆ ನೀಡಬೇಕು ಎಂದು ಡೆಪ್ಯುಟಿ ಇಂಜಿನಿಯರ್ ರಾಜಕುಮಾರ್ ಯಾದವ್ ತಮ್ಮ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಇಷ್ಟೆ ಅಲ್ಲ. ಇವರ ಪತ್ರದಲ್ಲಿ ಮತ್ತಷ್ಟು ನಗು ತರಿಸುವ ವಿಚಾರಗಳಿವೆ. ಆಲ್ ಇಂಡಿಯಾ ಮಜ್ಲಿಸೇ ಇತ್ತಿಹಾದುಲ್ ಮುಸ್ಲಿಮೀನ್ (AIMIM) ಮುಖಂಡ ಅಸಾದುದ್ದೀನ್ ಉವೈಸಿ ಹಿಂದಿನ ಜನ್ಮದಲ್ಲಿ ನಕುಲನಾಗಿದ್ದು, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಶಕುನಿ ಮಾಮ ಆಗಿದ್ದರು ಎಂದೂ ಅವರು ಬರೆದಿರುವ ಪತ್ರದಲ್ಲಿ ಹೇಳಲಾಗಿದೆ. ಅಲ್ಲದೇ ನಾವು ಮೂವರೂ ಗೆಳೆಯರಾಗಿದ್ದು, ನಾವು ಮಹಾಭಾರತದ ಪ್ರಮುಖ ಪಾತ್ರಗಳಾಗಿದ್ದೆವು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಅಲ್ಲದೆ, ತನ್ನ ಹಿಂದಿನ ಜನ್ಮದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ನಿಟ್ಟಿನಲ್ಲಿ ಭಗವದ್ಗೀತೆಯನ್ನು ಅಧ್ಯಯನ ಮಾಡಲು ಬಯಸಿರುವುದಾಗಿಯೂ ಪತ್ರದಲ್ಲಿ ಬರೆದಿದ್ದಾರೆ.
ಆತ್ಮ ಶಾಶ್ವತ ಎಂದು ನಾನು ನಂಬಿದ್ದೇನೆ. ಈ ಹಿನ್ನೆಲೆಯಲ್ಲಿ ನಾನು ಪ್ರತಿ ಮನೆಯಿಂದ ಗೋಧಿಯನ್ನು ಭಿಕ್ಷೆ ರೂಪದಲ್ಲಿ ಬೇಡಲು ಬಯಸಿದ್ದೇನೆ ಎಂದವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದಕ್ಕೆ ಉತ್ತರಿಸಿರುವ ಹಿರಿಯ ಅಧಿಕಾರಿಯೊಬ್ಬರು ಇದು ದುರಹಂಕಾರವಾಗಿದ್ದು, ಅವರು ಇಚ್ಚಿಸದಂತೆ ಮುಂದುವರಿಯಲು ಅನುಮತಿಸುವುದಿಲ್ಲ ಎಂದಿದ್ದಾರೆ.