
ಪ್ರೇಯಸಿಗೆ ಗಿಫ್ಟ್ ಕೊಡಿಸಲು ಕಳ್ಳತನಕ್ಕಿಳಿದ ಪ್ರಿಯಕರ: ಪ್ರೇಮಿಗಳ ಕಳ್ಳತನದ ಶೈಲಿ ಇಂಟ್ರೆಸ್ಟಿಂಗ್...
ಬೆಂಗಳೂರು: ಪ್ರಿಯತಮೆಯನ್ನು ಲಾಂಗ್ ಡ್ರೈವ್ ಕರೆದುಕೊಂಡು ಹೋಗಲು ಮತ್ತು ಆಕೆಗೆ ಗಿಫ್ಟ್ ಕೊಡಿಸಲೆಂದು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಜೋಡಿಯನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ರೌಡಿಶೀಟರ್ ವಿನಯ್ ಹಾಗೂ ಆತನ ಪ್ರೇಯಸಿ ಕೀರ್ತನಾ ಬಂಧಿತರು.
ಕೀರ್ತನಾ ತನ್ನ ಪ್ರಿಯಕರ ವಿನಯ್‌ಗೆ ತನ್ನನ್ನು ಲಾಂಗ್ ಡ್ರೈವ್ ಕರೆದುಕೊಂಡು ಹೋಗು, ಗಿಫ್ಟ್ ಕೊಡಿಸು ಎಂದೆಲ್ಲಾ ಪೀಡಿಸುತ್ತಿದ್ದಳು.
ಆದರೆ ಯಾವುದೇ ಕೆಲಸವಿಲ್ಲದ ರೌಡಿ ಶೀಟರ್ ಆಗಿದ್ದ ವಿನಯ್ ಪ್ರೇಯಸಿಯನ್ನು ಖುಷಿ ಪಡಿಸಲು ಕಳ್ಳತನಕ್ಕೆ ಇಳಿದಿದ್ದ. ಇದಕ್ಕೆ ಕೀರ್ತನಾ ಕೂಡಾ ಸಾಥ್ ನೀಡಿದ್ದಳು.
ಇವರಿಬ್ಬರೂ ಗಂಡ ಹೆಂಡತಿ ಸೋಗಿನಲ್ಲಿ ಮನೆ ಬಾಡಿಗೆ ಕೇಳಲು ಹೋಗುತ್ತಿದ್ದು, ಅಲ್ಲಿ ಮಾಲಕರೊಂದಿಗೆ ವಿನಯ್ ಮಾತನಾಡುತ್ತಿರುವಾಗ ಕೀರ್ತನಾ ಮನೆ ನೋಡುವ ನೆಪದಲ್ಲಿ ಮನೆ ಒಳಗಡೆ ಹೋಗಿ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದಳು.
ಇತ್ತೀಚೆಗೆ ಮಾರುತಿನಗರದ ಕುಲಶೇಖರ ಎನ್ನುವವರ ಮನೆಗೆ ಬಾಡಿಗೆಗೆ ಕೇಳುವ ನೆಪದಲ್ಲಿ ತೆರಳಿದ್ದ ಆರೋಪಿಗಳು, ಅಲ್ಲಿ ಮನೆಯಲ್ಲಿದ್ದ ಮೊಬೈಲ್, ಲ್ಯಾಪ್ಟಾಪ್ ಹಾಗೂ 15 ಸಾವಿರ ಹಣವನ್ನು ಕದ್ದು ಪರಾರಿಯಾಗಿದ್ದರು.
ಕುಲಶೇಖರ ಅವರು ನೀಡಿರುವ ದೂರಿನ ಮೇರೆಗೆ ಪೊಲೀಸರು ಈ ಜೋಡಿಯನ್ನು ಬಂಧಿಸಿದ್ದಾರೆ.